ಗದಗ : ಜಲ ಸಂಪನ್ಮೂಲ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ರಾಜ್ಯದ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಉತ್ತರದ ಮಾನ್ಸೂನ್ ಮಾರುತಗಳು ತಮಿಳುನಾಡಿಗೆ ಬರುತ್ತವೆ. ಆದರೆ ನಮ್ಮ ರಾಜ್ಯಕ್ಕೆ ಬರುವುದಿಲ್ಲ, ತಮಿಳುನಾಡಿನ ಡ್ಯಾಂ ನಲ್ಲಿ ನಮಗಿಂತಲೂ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಿದೆ. ಅಂತರ್ಜಲ ಸಾಕಷ್ಟು ಇದ್ದರೂ, ನೀರು ಬಿಡಲು ಒತ್ತಾಯಿಸುವುದು ನ್ಯಾಯ ಸಮ್ಮತವಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸಂಕಷ್ಟದಲ್ಲಿದೆ. ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ಡ್ಯಾಂ ನಲ್ಲಿ 100 ಟಿಎಂಸಿಗೂ ಅಧಿಕ ನೀರಿತ್ತು. ಆದರೆ ಈಗ ಕೇವಲ 53 ಟಿಎಂಸಿ ನೀರಿದೆ. ಮುಂದಿನ ಮಾನ್ಸೂನ್ ಮಾರುತವರೆಗೂ ನಮಗೆ ನೀರು ಬೇಕು. ಅದನ್ನು ಗಮನಿಸಿದರೆ ಕೃಷಿ ಹಾಗೂ ಬೆಂಗಳೂರಿನ ಜನರಿಗೆ ಬೇಕಾಗುವ ಕುಡಿಯುವ ನೀರಿನ ಮಟ್ಟವನ್ನು ಅಂದಾಜಿಸಿದಾಗ ನಮಗೆ 106 ಟಿಎಂಸಿ ನೀರು ಬೇಕು ಎಂದು ತಿಳಿಸಿದರು.
ಇದನ್ನೂ ಓದಿ : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ : ಬರೊಬ್ಬರಿ ₹ 21 ಲಕ್ಷ ಮಕ್ಮಲ್ ಟೋಪಿ..!
ರಾಜ್ಯದ ಕಬಿನಿ, ಹಾರಂಗಿ, ಹೇಮಾವತಿ ಹಾಗೂ ಕಾವೇರಿ ನದಿಗಳ ನೀರಿನ ಮಟ್ಟ 53 ಟಿಎಂಸಿ ಮಾತ್ರ ಇದೆ. ನಮಗೆ ಬೇಕಾಗಿರುವ ನೀರಿನ ಪ್ರಮಾಣಕ್ಕಿಂತ ಕಡಿಮೆಯಾಗಿ ಅರ್ಧದಷ್ಟು ನೀರು ಇದೆ. ಮಳೆ ಇಲ್ಲದ ಕಾರಣ 5 ಸಾವಿರ ಕ್ಯೂಸೆಕ್ ನೀರು ಸಹ ಬರುತ್ತಿಲ್ಲ. ಮುಂದಿನ 15-20 ದಿನಗಳವರೆಗೆ ಮಳೆ ಆಗುವ ಲಕ್ಷಣ ಕಾಣುತ್ತಿಲ್ಲ. ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗುವುದನ್ನು ಪರಿಗಣಿಸಿ ಎಂದು ಕೇಂದ್ರದ ಮೊರೆ ಹೋಗಿದ್ದೇವೆ ಎಂದು ಹೇಳಿದರು.
ನಾವು ನೀರು ಬಿಟ್ಟರೆ ವಾಪಸ್ ತರಲು ಆಗುವುದಿಲ್ಲ. ತಾಂತ್ರಿಕ ಕಾನೂನು ಪರಿಹಾರ ಕೇಳುತ್ತಿಲ್ಲ, ಇದಕ್ಕೆ ರಾಜಕೀಯ ಪರಿಹಾರವನ್ನು ಒದಗಿಸಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ನಾವು ನೀರು ಬಿಡಲಿಲ್ವಾ? ಕೃಷ್ಣಾ ನದಿಯಿಂದ 15 ಟಿಎಂಸಿ ನೀರು ಹಂಚಿಕೆ ಮಾಡಿಕೊಳ್ಳಲಿಲ್ವಾ? ಚೆನ್ನೈ ನೀರಿಗಾಗಿ 5 ಟಿಎಂಸಿ ಕೊಡಲಿಲ್ವಾ? ಇಂದಿರಾ ಗಾಂಧಿಯವರ ಸಮಯದಲ್ಲಿ 5 ಟಿಎಂಸಿ ನೀರನ್ನು ಕುಡಿಯುವುದಕ್ಕಾಗಿ ಚೆನ್ನೈಗೆ ಕೊಟ್ಟಿದ್ದೇವೆ ಎಂದು ಹೇಳಿದರು.
ಈ ಎಲ್ಲಾ ಸಂದರ್ಭಗಳನ್ನು ಅರ್ಥೈಸಿಕೊಂಡು ದಯಮಾಡಿ ಯಾವುದೇ ರೀತಿಯ ಒತ್ತಡ ಅಥವಾ ಕಾನೂನು ತಾಂತ್ರಿಕತೆಗಳ ಬಗ್ಗೆ ಮಾತನಾಡುವ ಬದಲು ಇದೊಂದು ರಾಜಕೀಯ ಪರಿಹಾರವಾಗಬೇಕು ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಅದನ್ನು ಹುಡುಕಿಕೊಳ್ಳಬೇಕು ಎಂದು ಎಚ್ ಕೆ ಪಾಟೀಲ್ ಸಲಹೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.