ಬೆಂಗಳೂರು: ಮದರಸಾಗಳಲ್ಲಿ ಇನ್ನು ಮುಂದೆ ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಣ ಜಾರಿ ಮಾಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ಇಂದು ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ವಿಜ್ಞಾನ, ಗಣಿತ ವಿಷಯಗಳ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಕಲಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: 2023-24ನೇ ಸಾಲಿನ ಯೋಜನೆಗಳಿಗೆ ಸಚಿವ ಜಮೀರ್ ಅಹ್ಮದ್ ಅಧಿಕೃತ ಚಾಲನೆ
ರಾಜ್ಯದಲ್ಲಿ ಈವರೆಗೆ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ 1265 ಮದರಸಾಗಳಿವೆ. ಈ ಪೈಕಿ 100 ಮದರಸಾಗಳ 5 ಸಾವಿರ ಮಕ್ಕಳಿಗೆ ಈ ವರ್ಷದಿಂದಲೇ ಪ್ರಾಯೋಗಿಕವಾಗಿ ಕನ್ನಡ-ಇಂಗ್ಲೀಷ್ ಕಲಿಕೆ ಆರಂಭಿಸಲಾಗುವುದು ಎಂದರು.
ಮುಂದಿನ ವರ್ಷದಿಂದ ಎಲ್ಲ ಮದರಸಾಗಳಲ್ಲಿ ಕನ್ನಡ-ಇಂಗ್ಲೀಷ್ ಶಿಕ್ಷಣ ಆರಂಭಿಸಲು ಪ್ರಸ್ತಾವನೆ ಸಿದ್ದಪಡಿಸಲು ಸಚಿವ ಜಮೀರ್ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ 9, 10 ಹಾಗೂ 12 ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸಲು ಸಿದ್ದಪಡಿಸಿರುವ ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ವಖ್ಫ್ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.