ಗದಗ : ಕಾವೇರಿ ನದಿ ನೀರಿನ ವಿಚಾರದಲ್ಲಿ ನಮ್ಮ ಹೋರಾಟ 10 ಕ್ಯುಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂಬುದಾಗಿತ್ತು. ನಮ್ಮ ಈ ನಿಲುವು ಸರಿಯಾಗಿದೆ ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ಒಪ್ಪಿಕೊಂಡಂತಿದೆ. ಅಷ್ಟರ ಮಟ್ಟಿಗೆ ಸಮಾಧಾನವಾಗಿದೆ, ಆದರೆ 15 ದಿನ ನೀರು ಹರಿಸಬೇಕು ಎಂಬುದು ಕಠೋರ ನಿರ್ಣಯ ಎಂದು ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ನಮ್ಮ ಸಮಿತಿ ನಿರ್ಣಯ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗುತ್ತದೆ. ಅವರು 15 ದಿನ ನೀರು ಬಿಡುವ ನಿರ್ಧಾರ ಕಡಿತಗೊಳಿಸುವ ಬಗ್ಗೆ ಪರಿಶೀಲನೆ ಮಾಡಬೇಕು. ಆ ದಿಸೆಯಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಮಾಡಲಿದೆ ಎಂದರು.
ಇದನ್ನೂ ಓದಿ : ‘ನಾಯಕನಿಲ್ಲದ ಬಿಜೆಪಿಯಲ್ಲಿ ಯಾರೂ ಮಾಸ್ ಲೀಡರ್ ಇಲ್ಲ’
ಅವಧಿಪೂರ್ವ ಲೋಕಸಭೆ ಚುನಾವಣೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾನೂನು ಸಚಿವರು, ನವೆಂಬರ್, ಡಿಸೆಂಬರ್ ಅಥವಾ ಜನವರಿಯಲ್ಲಾದರೂ ಎಲೆಕ್ಷನ್ ಮಾಡಲಿ. ಕರ್ನಾಟಕದ ಮತದಾರರ ಮನಸ್ಸು ನೋಡಿದ ಮೇಲೆ ಬಿಜೆಪಿಗೆ ಕೇಂದ್ರದಲ್ಲಿ ಸೋಲು ಎಂದು ಗೊತ್ತಾಗಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯನ್ನು ಯಾವಾಗಲಾದರೂ ಮಾಡಲಿ, ಆದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಅದೇ ಕಾರಣಕ್ಕೆ ನಮ್ಮ ಪಕ್ಷದತ್ತ ನಾಯಕರು ಹಾಗೂ ಕಾರ್ಯಕರ್ತರು ಧಾವಿಸುತ್ತಿರುವುದು, ರಾಜಕೀಯವಾಗಿ ಉತ್ತಮ ಹಾಗೂ ಆರೋಗ್ಯಕರ ಬೆಳವಣಿಗೆ ಎಂದರು.
ಕಾಂಗ್ರೆಸ್ ಮನಸ್ಸನ್ನು ಅರಿತವರು, ಸಮಾಜವಾದಿ ತತ್ವದಲ್ಲಿ ವಿಶ್ವಾಸವಿರುವವರು, ಜಾತ್ಯಾತೀತ ಮನೋಭಾವನೆ ಇರುವವರು ಹಾಗೂ ಬಡವರ ಬಗ್ಗೆ ಕಳಕಳಿ ಇರುವವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇವೆ. ನಮ್ಮನ್ನ ಯಾರು ಸಂಪರ್ಕ ಮಾಡಿದ್ದಾರೆ ಎಂಬುದು ಚರ್ಚೆಯ ವಿಷಯವಲ್ಲ. ಆದರೆ ಬಹಳಷ್ಟು ನಾಯಕರು ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ನೀವು ಹೇಳುವುದಕ್ಕಿಂತ ಡಬಲ್ ಸಂಖ್ಯೆಯಲ್ಲಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ಬಿಚ್ಚಿಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.