ಗದಗ: ಕರ್ನಾಟಕದ ಇತಿಹಾಸದಲ್ಲಿ ಚುನಾವಣೆ ನಡೆದು ಮೂರು ತಿಂಗಳಾದರೂ ವಿರೋಧ ಪಕ್ಷನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗದಿದ್ರೆ ಆ ಪಕ್ಷ ಎಷ್ಟು ಪ್ರಬಲವಾಗಿದೆ? ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಜೆಟ್ ಅಧಿವೇಶನ, ಜಂಟಿ ಅಧಿವೇಶನ ನಡೆದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ವಿರೋಧ ಪಕ್ಷದ ನಾಯಕ ಇಲ್ಲದೇ ಇರುವುದು ಇತಿಹಾಸವಾಗಿದೆ. ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ, ಸಹಮತ ಇಲ್ಲ, ಹೊಂದಾಣಿಕೆ ಇಲ್ಲ, ನಾಯಕತ್ವ ಇಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಟೀಕಿಸಿದರು.
ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ನಾಯಕತ್ವ ವಹಿಸಿದ ಪಕ್ಷ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡದೊಂದು ಇತಿಹಾಸ ಇದೆ, ಸಿದ್ದಾಂತ ಇದೆ. ದೇಶದ ಅಭಿವೃದ್ಧಿಗಾಗಿ ಪಂಚ ವಾರ್ಷಿಕ ಯೋಜನೆಗಳನ್ನು ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷ ತಾನಾಗಿಯೇ ಬನ್ನಿ ಬನ್ನಿ ಎಂದು ಕರೆಯುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಯಾರು ಬಂದರೂ ಅವರಿಗೆ ಕಾಂಗ್ರೆಸ್ ಬಾಗಿಲು ತೆರೆದಿದೆ ಎಂದು ಆಹ್ವಾನ ನೀಡಿದರು.
ಇದನ್ನೂ ಓದಿ: ಲೋಕಸಭೆಗೆ ಸ್ಪರ್ಧೆ ಬಗ್ಗೆ ಸಮಯ ಬಂದಾಗ ತಿಳಿಸುವೆ: ತೇಜಸ್ವಿನಿ ಅನಂತಕುಮಾರ್
ಬಿಜೆಪಿಯಿಂದ ಒಬ್ಬರು ಹೋದ್ರೆ, 40 ಜನರನ್ನು ವಾಪಸ್ ತರುವ ಬಿ.ಎಲ್.ಸಂತೋಷ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿ.ಎಲ್.ಸಂತೋಷ್ ಅವರಿಗೆ ಜನ ಉತ್ತರವನ್ನು ಕೊಟ್ಟಿದ್ದಾರೆ. ನಿಮ್ಮ ಯೋಗ್ಯತೆ ಏನು ಅಂತಾ ಜನ ಉತ್ತರ ಕೊಟ್ಟಿದ್ದಾರೆ. ಯಾರೂ ಬಿಜೆಪಿಗೆ ಹೋಗಲ್ಲ ಎಂದು ಸಚಿವ ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.
ಬೇರೆಯವರಿಗೆ ನೀರು ಕೊಡುವ ಸ್ಥಿತಿಯಲ್ಲಿಲ್ಲ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಹದೇವಪ್ಪ, 100 ವರ್ಷದ ಇತಿಹಾಸ ಇರುವ ಸಮಸ್ಯೆ ಇದು. ಕಾನೂನಾತ್ಮಕ ಹೋರಾಟಗಳಿಗೆ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಕಾವೇರಿ ವಾಟರ್ ಬೋರ್ಡ್ ಸ್ಥಾಪನೆ ಮಾಡಿದೆ. ಮಳೆ ಇಲ್ಲಾ, ಜಲಾಶಯಗಳಲ್ಲಿ ನೀರು ಸಂಗ್ರಹವಾಗಿಲ್ಲ. ನಾವು ಬೇರೆಯವರಿಗೆ ನೀರು ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಕುಡಿಯುವ ನೀರು ಹಾಗೂ ನಮ್ಮ ರೈತರ ಹಿತ ಕಾಪಾಡಲು ಆದ್ಯತೆ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.