ಶಿವಮೊಗ್ಗ : ಖರ್ಗೆ ಅವರೇ ರಬ್ಬರ್ ಸ್ಟ್ಯಾಂಪ್ ಆಗಬೇಡಿ, ಬೇರೆಯವರ ಮಾತು ಕೇಳಬೇಡಿ, ತಿದ್ದುಕೊಳ್ಳಿ. ತಿದ್ದುಕೊಳ್ಳದಿದ್ದರೆ ಬೇರೆ ಭಾಷೆ ಬಳಸಬೇಕಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿ ಅವರಿಗೆ 100 ತಲೆಗಳಿವೆ ಎಂದಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ತಲೆಯೂ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.
ನರೇಂದ್ರ ಮೋದಿ ಆದರ್ಶ ರಾಜಕಾರಣಿ. ಗ್ರಾಪಂ, ಜಿಪಂ, ವಿಧಾನಸಭೆ ಚುನಾವಣೆಗೂ ಅವರ ಫೋಟೊ ಮತ್ತು ಹೆಸರು ಬಳಸಿಕೊಳ್ತೇವೆ. ನಿಮಗೆ ಯೋಗ್ಯತೆ ಇದ್ದರೆ ರಾಹುಲ್, ಸೋನಿಯಾ ಮುಖ ಇಟ್ಟುಕೊಂಡು ಮತ ಪಡೆಯಿರಿ ನೋಡೊಣ ಎಂದು ಸವಾಲು ಎಸೆದರು.
ರಮೇಶ್ ಜಾರಕಿಹೊಳಿ ಜೆಡಿಎಸ್‌ಗೆ ಬರುವುದಾಗಿ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ ಅವರು, ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಜೆಡಿಎಸ್‌ಗೆ ಹೋಗ್ತಾರಾ ಎಂದು ಪ್ರಶ್ನಿಸಿದರು. ಬೀದಿಯಲ್ಲಿರುವ ನಾಯಿಯೂ ಜೆಡಿಎಸ್‌ಗೆ ಹೋಗಲ್ಲ. ಇಬ್ರಾಹಿಂಗೆ ಮಾತ್ರ ಹೇಳ್ತಾ ಇದ್ದೇನೆ. ದೇವೇಗೌಡರಿಗೆ ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಇಬ್ರಾಹಿಂ ಜೆಡಿಎಸ್‌ಗೆ ಹೋಗಿದ್ದಾರೆ. ಮಾಡಲಿಕ್ಕೆ ಕೆಲಸವಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.