ಉಡುಪಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿರುವ ಶೋಭಾ ಕರಂದ್ಲಾಜೆಯವರು ಧೈರ್ಯವಿದ್ದರೆ ಉಡುಪಿಗೆ ಬಂದು ಪ್ರೆಸ್‌ಮೀಟ್ ಕರೆದು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವಂತೆ ಹೇಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೇಂದ್ರ ಸಚಿವೆಗೆ ಸವಾಲು ಹಾಕಿದ್ದಾರೆ.
ಜಿಲ್ಲೆಯ ಉಚ್ಚಿಲದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೋಭಾ ಅವರು ನನಗಿಂತ ಸೀನಿಯರ್ ,ಎರಡು ಮೂರು ಬಾರಿ ಮಂತ್ರಿಯಾಗಿದ್ದಾರೆ. ಅವರಿಗೆ ವಾಸ್ತವದ ಬಗ್ಗೆ ತಿಳಿದಿದೆ. ಈಗ ಚುನಾವಣೆ ಹತ್ತಿರವಿದೆ. ವಿರೋಧ ಪಕ್ಷದವರಾಗಿ ನಮ್ಮ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಆದರೆ ನೀವು ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಪ್ರೆಸ್ ಮೀಟ್ ಕರೆಯಿರಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಮಿತಿ ಸೇರಲು ನಿರಾಕರಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ
ಶೋಭಾ ಕರಂದ್ಲಾಜಿ ಹೇಳಿದ್ದೇನು..?
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಹಲವಾರು ತೊಂದರೆಗಳು ಸೃಷ್ಟಿಯಾಗಿವೆ. ಎಲ್ಲವನ್ನು ಉಚಿತವಾಗಿ ಕೊಟ್ಟರೆ ಜನರಿಗೂ ಸಂತೋಷವಾಗುತ್ತದೆ. ಚುನಾವಣೆಯಲ್ಲಿ ಎಲ್ಲಾ ಪಕ್ಷಗಳೂ ಕೆಲಸ ಮಾಡುತ್ತವೆ, ಆದರೆ ಮತಯಂತ್ರ ಬೇರೆ ಬೇರೆ ಇರುತ್ತದೆ, ಯಾರಿಗೆ ಮತ ಹಾಕಬೇಕೆನ್ನುವುದನ್ನು ಅರಿತೇ ಮತದಾರರು ತಮ್ಮ ಮತ ಚಲಾಯಿಸುತ್ತಾರೆ. ಕರ್ನಾಟಕ ಸಹಿತ ಕೆಲ ರಾಜ್ಯಗಳಲ್ಲಿ ಕಾಂಗ್ರೆಸಿನ ಉಚಿತ ಯೋಜನೆಗಳಿಂದ ಹಲವು ಆವಾಂತರಗಳಾಗಿವೆ. ಆದರೆ ನೀವು ಕೆಲವರಿಂದ ಕಿತ್ತು, ಇನ್ನು ಕೆಲವರಿಗೆ ಉಚಿತ ಭಾಗ್ಯ ಕೊಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ರಾಜ್ಯದ ನ್ಯಾಯಾಧೀಶರು, ಶಿಕ್ಷಕರಿಗೆ ಸಂಬಳ ತಡವಾಗಿದೆ. ಹಲವು ಯೋಜನೆಗಳಿಗೆ ಬೇಕಾದ ಹಣ ಸಿಗುತ್ತಿಲ್ಲ. ಸಾಮಾಜಿಕ ಭದ್ರತಾ ಯೋಜನೆಗಳಿಗೂ ಹಣವಿಲ್ಲ. ಗ್ಯಾರಂಟಿ ಕೊಟ್ಟರೆ ಸಾಕು, ಬೇರೆಲ್ಲಾ ಬಿದ್ದು ಹೋಗಲಿ ಎಂದು ಕಾಂಗ್ರೆಸ್ ಯೋಚಿಸುತ್ತಿರುವಂತಿದೆ.
ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಪಾಲಿನ ಕೊಡುಗೆ ನಿಂತಿದೆ. ಖಾಸಗಿ ವಾಹನ ಚಾಲಕರಿಗೆ, ಸಾರಿಗೆ ಇಲಾಖೆಯ ನಷ್ಟಕ್ಕೇನು ಪರಿಹಾರ ಎಂದು ಮುಖ್ಯಮಂತ್ರಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.