ವಿಜಯಪುರ: ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ರಾಜ್ಯಕ್ಕೆ ಬಂದು ಹೋದರೂ ಇದುವರೆಗೂ ರಾಜ್ಯದ ಪಾಲಿನ ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ. ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ಜಿಲ್ಲೆಯ ಇಂಡಿ, ಚಡಚಣ ತಾಲ್ಲೂಕುಗಳಲ್ಲಿ ಬರ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ, ಕೇಂದ್ರ ಸರ್ಕಾರ ರಾಜ್ಯದ ಪಾಲಿಗೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ. ನಮ್ಮ ಬರ ಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಬೆಂಬಲ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಆದರೆ, ರಾಜ್ಯ ಸರ್ಕಾರಕ್ಕೆ ಕೇಂದ್ರದ ಬೆಂಬಲ ಇಲ್ಲದಿದ್ದರೂ, ಕಾಂಗ್ರೆಸ್ ಸರ್ಕಾರ ಬರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರೌಡಿಶೀಟರ್‌ಗಳಿಗೆ ಜೋಶಿ ಬೆಂಬಲ: ಅರವಿಂದ್ ಏಗನಗೌಡರ
ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರದ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಪ್ರತಿ ಹೆಕ್ಟೇರ್‌ಗೆ ನಿಗಡಿಪಡಿಸಿರುವ ಪರಿಹಾರದ ಹಣವು ಬೆಳೆ ಬೆಳೆಯುವ ಖರ್ಚಿಗೂ ಸಾಲುವುದಿಲ್ಲ. ಈ ಪರಿಹಾರದ ಮೊತ್ತ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದು ಲೇವಡಿ ಮಾಡಿದ್ದಾರೆ.
ಒಂದು ಎಕರೆಯಲ್ಲಿ ಬಿತ್ತನೆ ಹಾಗೂ ನಿರ್ವಹಣೆಗೆ ರೈತನಿಗೆ ಸುಮಾರು 10 ಸಾವಿರ ರೂಪಾಯಿ ಖರ್ಚಾದರೆ, ಪರಿಹಾರವಾಗಿ ಕೇವಲ 3,500 ರೂಪಾಯಿ ಮಾತ್ರ ನೀಡಲಾಗುತ್ತದೆ. ಇದು ಅವೈಜ್ಞಾನಿಕವಾದ ನಡೆಯಾಗಿದೆ, ಇದನ್ನು ಕೂಡಲೇ ಹಿಂಪಡೆಯಬೇಕು. ರೈತರು ಬೆಳೆ ನಿರ್ವಹಣೆ ಮಾಡಿದ ವೆಚ್ಚದಲ್ಲಿ ಕನಿಷ್ಠ ಶೇ 50ರಷ್ಟಾದರೂ ಬೆಳೆ ಹಾನಿ ಪರಿಹಾರ ಒದಗಿಸಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.