ಬೆಂಗಳೂರು: ಇಂಡಿಯಾ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ ‘ಗೇಮ್ ಚೇಂಜರ್ಸ್’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ ‘ನೇಮ್ ಚೇಂಜರ್ಸ್’ ಆಗಿದೆ’ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಗೇಮ್ ಚೇಂಜರ್ಸ್’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ ‘ನೇಮ್ ಚೇಂಜರ್ಸ್’ ಆಗಿದೆ! 2014ರ ಮೊದಲು ಅಮೆರಿಕಾ, ಬ್ರಿಟನ್, ರಷ್ಯಾಗಳಂತಹ ಮುಂದುವರಿದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು. ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ ‘ಮಣಿಪುರ್ ಮಾಡೆಲ್’ ಸೃಷ್ಟಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ; ಪಿಎಂ ಮೋದಿ ಪ್ರವಾಸದ ಲೆಟರ್‌ನಲ್ಲೂ ‘ಭಾರತ್’; ಅಧಿಕೃತವಾಯ್ತಾ ‘ಇಂಡಿಯಾ’ ಹೆಸರು ಬದಲಾವಣೆ?
‘ಯಕಶ್ಚಿತ್ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಭಾರತವನ್ನು ತುಲನೆ ಮಾಡಿಕೊಂಡು ಬೆನ್ನುತಟ್ಟಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿರುವ ಬಿಜೆಪಿಯಿಂದ ಹೆಸರುಗಳ ಬದಲಾವಣೆಗಳನ್ನಲ್ಲದೆ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಮರ್ಥ ಆಡಳಿತಗಾರರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ!’ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.