ಮಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ.ವಿಜಯೇಂದ್ರ ಅವರಿಗೆ ಶುಭವಾಗಲಿ. ಇದರಿಂದ ಕಾಂಗ್ರೆಸ್ ಮೇಲೆ ಎಫೆಕ್ಟ್ ಆಗುತ್ತೆ ನಿಜ, ಆದ್ರೆ ಆಗೋದು ಮಾತ್ರ ಒಳ್ಳೆಯ ಎಫೆಕ್ಟ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಆದ ನಿರ್ಲಕ್ಷ್ಯದಿಂದ ಮಾತ್ರ ಕಾಂಗ್ರೆಸ್ ಆಡಳಿತಕ್ಕೆ ಬಂದಿಲ್ಲ. ಕಳೆದ ಸರ್ಕಾರದ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ ಈ ಎಲ್ಲ ಕಾರಣದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಬಿಜೆಪಿಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ಸ್ಥಾನದಿಂದ ಯಾಕೆ ಇಳಿಸಿದರು? ಈಗ ವಿಜಯೇಂದ್ರ ಬಂದಿದ್ದಾರೆ. ಅವರೇ ಈ ಬಗ್ಗೆ ಮಾಹಿತಿ ಕೊಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸ್ಮಾರಕಗಳ ದತ್ತು ಪಡೆದವರಿಗೆ ಬಹುಮಾನ: ಹೆಚ್.ಕೆ.ಪಾಟೀಲ್
ಬಿಜೆಪಿಯಲ್ಲಿ ಹೊಂದಾಣಿಕೆಯಿಲ್ಲ, ನಾಯಕತ್ವದ ಕೊರತೆಯಿದೆ. ಹೀಗಾಗಿಯೇ ವಿಜಯೇಂದ್ರಗೆ ಪಟ್ಟ ಸಿಕ್ಕಿದೆ. ಸಿ.ಟಿ ರವಿ, ಯತ್ನಾಳ್, ಸುನೀಲ್ ಕುಮಾರ್ ಇವತ್ತು ಗಾಯಾಬ್ ಆಗಿದ್ದಾರೆ. ಕಾಂಗ್ರೆಸ್‌ನವರು ನಾವು ವಿಜಯೇಂದ್ರ ಅವರಿಗೆ ಶುಭ ಹಾರೈಸುತ್ತೇವೆ. ಆದರೆ ಅವರ ಪಕ್ಷದವರೇ ಅವರಿಗೆ ಶುಭ ಹಾರೈಸ್ತಿದ್ದಾರಾ? ಎಂದು ನಾವು ಕೇಳಬೇಕಾಗಿದೆ. ಬಿಜೆಪಿಯವರ ದುರ್ಬಲತೆ ಮೇಲೆ ನಾವು ತಂತ್ರ ಮಾಡೋರಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರನ್ನು ಕಟ್ಕೊಂಡು ನಮಗೇನು ಮಾಡೋದಿದೆ.
ಆರು ತಿಂಗಳಾಗಿದೆ, ಮೇಲ್ಮನೆ ಕೆಳಮನೆಯಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ, ಬಜೆಟ್ ಭಾಷಣ ಆದರೂ ನಾಯಕನ ಆಯ್ಕೆಯಾಗಿಲ್ಲ. 15 ದಿನದಲ್ಲಿ ಬೆಳಗಾವಿ ಅಧಿವೇಶನ ಪ್ರಾರಂಭ ಆಗುತ್ತದೆ. ವಿರೋಧ ಪಕ್ಷದ ನಾಯಕ ಯಾರು ಎಂದು ಇನ್ನೂ ಗೊತ್ತಿಲ್ಲ. ಏಕೆಂದರೆ ಯಾವುದೇ ಲೀಡರ್ ಬಿಜೆಪಿಯಲ್ಲಿ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಜೆಡಿಎಸ್ ಕಚೇರಿ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ನಮಗೆ ಬೇರೆ ಕೆಲಸ ಇಲ್ವಾ? ನಾವು ಆಡಳಿತ ನಡೆಸ್ತಾ ಇದ್ದೀವಿ ಸ್ವಾಮಿ. ಏನಾದರೂ ಮಾಡಬೇಕಂದ್ರೆ ಬಹಿರಂಗವಾಗಿ ಮಾಡ್ತೀವಿ. ಅದೇನು ರಾತ್ರೋರಾತ್ರಿ ಹಾಕಿದ್ದ? ಎದೆ ತಟ್ಟಿ ಮುಂದೆ ಬಂದು ಭ್ರಷ್ಟಾಚಾರ ಮಾಡ್ತಿದ್ದೀರಿ ಎಂದು ಹೇಳಿದ್ದೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡಿಲ್ಲ. ಸಿಬ್ಬಂದಿಯಿಂದ ಕುಮಾರಸ್ವಾಮಿ ಮನೆಯಲ್ಲಿ ಏನು ಅಚಾತುರ್ಯ ನಡೆದಿದೆಯೆಂದು ನನಗೆ ಗೊತ್ತಿಲ್ಲ. ಕಾನೂನಾತ್ಮಕ ಕ್ರಮ ತಗೊಳ್ಳಿ ಎಂದು ಹೇಳಿದ್ದಾರೆ. ಆದರೆ ಕುಮಾರಸ್ವಾಮಿ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ್ರು. ಕತ್ತಲಲ್ಲಿ ಇರಿಸ್ತೀವಿ ಎಂದ ಅವರು, ಹೆಚ್ಚು ಬೆಳಕು ತೆಗೆದುಕೊಳ್ಳುವುದು ಎಷ್ಟು ಸರಿ? ಎಂದು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ಕರೆಂಟ್ ಕಳ್ಳ ಪೋಸ್ಟರ್; ನಾನು ಅದರ ಬಗ್ಗೆ ಮಾತನಾಡಲ್ಲ: ಡಿಕೆಶಿ
ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮ ತತ್ವ-ಸಿದ್ದಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್‌ಗೆ ಬರಬಹುದು. ಎಂ.ಪಿ.ಎಲೆಕ್ಷನ್ ಹತ್ರ ಬರಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತೆ. ಯಾರು ಅಲ್ಲಿ ರಕ್ಷಣೆ ಕೊಡ್ತಿದ್ದಾರೆ? ಪಕ್ಷದಲ್ಲಿ
ಲೀಡರ್ ಇಲ್ಲ ಅಂತಾನೆ ನಾಯಕತ್ವ ಹುಡುಕಿಕೊಂಡು ನಮ್ಮ ಕಾಂಗ್ರೆಸ್ ಪಕ್ಷದ ಕಡೆ ಬರ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.