ಹಾವೇರಿ: ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬರ್ಥದಲ್ಲಿ ಸಚಿವ ಶಿವಾನಂದ ಪಾಟೀಲ್ ಮಾತನಾಡಿದ್ದಾರೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಇಂದು ಹಾವೇರಿಯಲ್ಲಿ ನಡೆದಿದೆ.
ಇನ್ನು ಸಚಿವರು ರೈತರ ಜೀವದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ರೈತರು ಕೆಂಡಕಾರಿದ್ದು, ಸಚಿವರ ಹೇಳಿಕೆಯು ಸದ್ಯ ಭಾರಿ ವಿವಾದ ಹುಟ್ಟುಹಾಕಿದೆ.
ಸಚಿವರು ಹೇಳಿದ್ದೇನು?: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ನಾವು 2015ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅಂದಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2020ನೇ ವರ್ಷದಲ್ಲಿ 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ‘ಭಾರತವನ್ನು ಬದಲಿಸುತ್ತೇನೆ ಎಂದ ಬಿಜೆಪಿ ಬದಲಿಸಿದ್ದು ಹೆಸರು ಮಾತ್ರ’
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲ್ಲ. ರೈತರಿಗೆ ಯೋಗ್ಯವಾಗಿ ಸಹಾಯ ನೀಡಿ, ರೈತರ ಆತ್ಮಹತ್ಯೆ ಕಡಿಮೆಯಾಗುತ್ತದೆ. 5 ಲಕ್ಷದ ಆಸೆಗೆ ಯಾರಾದ್ರೂ ಪ್ರಾಣ ಕಳೆದುಕೊಳ್ತಾರಾ? ಎಂದು ದನಿ ಎತ್ತಿದರು.
ಈ ರೀತಿ ಹೇಳಿಕೆ ಸರಿಯಲ್ಲ, ನೀವು ರೈತರಿಗೆ ಕ್ಷಮೆ ಕೇಳಬೇಕು ಎಂದೂ ರೈತರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾನು ರೈತರ ಬಗ್ಗೆ ಹಗುರವಾಗಿ ಮಾತನಾಡಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ ಎಂದು ಹೊರಟು ಹೋದರು.
ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಜಾರಿ ಬಿದ್ದ ಬಿಹಾರ ಸಿಎಂ
50 ಲಕ್ಷ ಕೊಡ್ತೀವಿ, ಆತ್ಮಹತ್ಯೆ ಮಾಡ್ಕೋತಿರಾ?: ಇನ್ನು ಸಚಿವರ ಹೇಳಿಕೆ ಖಂಡಿಸಿರುವ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ನಾವು ಇವತ್ತೇ 50 ಲಕ್ಷ ಹಣ ಕೊಡುತ್ತೇವೆ, ಸಚಿವರು ಆತ್ಮಹತ್ಯೆ ಮಾಡಿಕೊಳ್ತೀರಾ? ನಿಮ್ಮ ಪರಿಹಾರದ ಬದಲು ಆತ್ಮಹತ್ಯೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ರೆ ಸಚಿವರನ್ನು ಘೇರಾವ್ ಹಾಕಲಾಗುವುದು. ಅವರನ್ನು ಕೂಡಲೇ ಹಾವೇರಿ ಜಿಲ್ಲಾ ಉಸ್ತುವರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.