ಬೆಂಗಳೂರು: ಇಲಾಖೆ ಕೆಲಸದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಸಂಜೆ ವಾಪಸಾಗುತ್ತೇನೆ. ಪಕ್ಷವು ನನಗೆ ಒಳ್ಳೆಯ ಅವಕಾಶ ಕೊಟ್ಟಿದೆ, ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ಸಚಿವ ವಿ ಸೋಮಣ್ಣ ಹೇಳಿದರು. ಇಂದು ದೆಹಲಿಗೆ ಪ್ರಯಾಣಿಸಿದ ವಿ ಸೋಮಣ್ಣ ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನು ಯಾರ ಬಳಿಯೂ ಅಂಗಲಾಚಲ್ಲ, ಹಲ್ಲು ಕಿರಿದು ನಿಲ್ಲಲ್ಲ. ನೇರ ರಾಜಕೀಯ ಮಾಡಿಕೊಂಡು ಬಂದವನು. ಸದ್ಯದ ಪರಿಸ್ಥಿತಿಯಲ್ಲಿ ಸತ್ಯ ಕಹಿಯಾಗುತ್ತದೆ, ನೇರ ನುಡಿಗಳಿಂದ ಹಿನ್ನಡೆಯಾಗುತ್ತದೆ ಎಂದರು. ಅಂದಹಾಗೆ ಸೋಮಣ್ಣ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ,
ಯಡಿಯೂರಪ್ಪ ದೊಡ್ಡವರು, ರಾಜ್ಯದ ನಾಯಕರು ಅವರ ಬಗ್ಗೆ ನಾನು ಮಾತನಾಡಲ್ಲ. ಆದರೆ ಹದಿನೈದು ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರನ್ನೇ ಕೇಳಿ ಎಂದು ಬಿಎಸ್ ವೈ ವಿರುದ್ಧ ಅಸಾಮಧಾನ ಹೊರಹಾಕಿದ್ದಾರೆ. ಸೋಮಣ್ಣ ಪಕ್ಷ ಬಿಡಲ್ಲ, ಅವರೊಂದಿಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರಾದರೂ ಇನ್ನೂ ಮಾತುಕತೆ ನಡೆಸದೇ ಇರೋದು ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮಣ್ಣರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.