ಚೆನ್ನೈ : ಸನಾತನ ಧರ್ಮದ ಕುರಿತ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸಿಎಂ ಎಂ.ಕೆ ಸ್ಟಾಲಿನ್ ಪುತ್ರನ ಬೆಂಬಲಕ್ಕೆ ನಿಂತಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಎಂ.ಕೆ ಸ್ಟಾಲಿನ್, ಉದಯನಿಧಿ ಹೇಳಿಕೆಗೆ ತಕ್ಕ ಉತ್ತರ ಅಗತ್ಯ ಎಂದು ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಧಾನಿಯವರ ಹೇಳಿಕೆ ಗಮನಿಸಿದರೆ ಉದಯನಿಧಿ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಅವರಿಗೆ ತಿಳಿದಿಲ್ಲವೇ? ಅಥವಾ ತಿಳಿಯದಂತೆ ನಟಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉದಯನಿಧಿ ಹೇಳಿಕೆ ತಿರುಚಿದ ಆರೋಪ : ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಮೇಲೆ ಬಿತ್ತು ಕೇಸ್!
ಸನಾತನ ಧರ್ಮದಲ್ಲಿರುವ ಅಮಾನವೀಯ ಆಚರಣೆಗಳ ಬಗ್ಗೆ ಮಗ ಉದಯನಿಧಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪರ ಸಂಘಟನೆಗಳು ಅದನ್ನು ತಪ್ಪಾಗಿ ಅರ್ಥೈಸಿವೆ. ಪ್ರಧಾನಿ ಈ ಬಗ್ಗೆ ತಿಳಿದುಕೊಳ್ಳಲು ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಪರ ಪ್ರಧಾನಿ ನಿಂತಿರುವುದು ನನಗೆ ಆಶ್ಚರ್ಯ ಮೂಡಿಸಿದೆ ಎಂದಿದ್ದಾರೆ.
‘ಜನಾಂಗೀಯ ಹತ್ಯೆ’ ಪದ ಬಳಸಿಲ್ಲ : ಪರಿಶಿಷ್ಟ, ಬುಡಕಟ್ಟು ಸಮುದಾಯಗಳು ಮತ್ತು ಮಹಿಳೆಯರ ಬಗ್ಗೆ ಸನಾತನ ಧರ್ಮದಲ್ಲಿ ಇರುವ ಅಸಮಾನತೆಗಳ ಬಗ್ಗೆ ಉದಯನಿಧಿ ಮಾತನಾಡಿದ್ದಾರೆ. ಅವರು ‘ಇಂಗ್ಲಿಷ್ ನಲ್ಲಾಗಲಿ, ತಮಿಳಿನಲ್ಲಾಗಲಿ ಜನಾಂಗೀಯ ಹತ್ಯೆ ಎಂಬ ಪದ ಬಳಸಿಲ್ಲ’. ಬಿಜೆಪಿ ಪರ ಮಾಧ್ಯಮಗಳು ಈ ಬಗ್ಗೆ ಉತ್ತರ ಭಾರತದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಕೇಂದ್ರ ಸಚಿವರಾದ ಅಮಿತ್ ಶಾ, ರಾಜ್ ನಾಥ್ ಸಿಂಗ್ ಕೂಡ ಇದೇ ಸುಳ್ಳನ್ನು ಪಸರಿಸುತ್ತಿದ್ದರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.