ಬೀದರ: ಮಳೆಯ ಕೊರತೆಯಿಂದಾಗಿ ಬಹುತೇಕ ರೈತರು ಜಿಲ್ಲೆಯಲ್ಲಿ ಬೆಳೆ ಕಳೆದುಕೊಂಡಿದ್ದಾರೆ. ಬಿತ್ತನೆ ಮಾಡಿದ್ದ ಬೆಳೆ ಉತ್ತಮವಾಗಿ ಮೊಳಕೆ ಬಂದಿದೆ. ಆದರೂ ಸಹ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಫಲ ನೀಡಬೇಕಾಗಿದ್ದ ಬೆಳೆ ಕೈಕೊಟ್ಟಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಖಾಶೆಂಪುರ್, ಕಾಡವಾದ, ಬಗದಲ್ ತಾಂಡ, ಮರಕಲ್, ಮುರ್ಕಿ, ಚಿಕ್ಲಿ, ಗಣೇಶಪೂರ್ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಜೆಡಿಎಸ್ ಪಕ್ಷದ ನಾಯಕರೊಂದಿಗೆ ಬರ ಅಧ್ಯಯನ ನಡೆಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ್ದೇವೆ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬೀದರ್ ಜಿಲ್ಲೆಯ ವಿವಿಧೆಡೆ ಬೆಳೆ ವೀಕ್ಷಿಸಿದ್ದೇನೆ. ನಮ್ಮ ರೈತರ ಸಂಕಷ್ಟದ ಪರಿಸ್ಥಿತಿಯ ಕುರಿತು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾನು ಕದ್ದು ಮುಚ್ಚಿ ಪಕ್ಷ ಬಿಟ್ಟು ಹೋಗಲ್ಲ: ಶಾಸಕ ಶಿವರಾಮ್ ಹೆಬ್ಬಾರ್
ಅಲ್ಲದೆ ನವೆಂಬರ್ 17ರಂದು ನಗರದಲ್ಲಿನ ಜೆಡಿಎಸ್ ಕಛೇರಿಯಿಂದ ಡಿಸಿ ಕಛೇರಿಯವರಿಗೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಶೀಘ್ರವಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ರೈತರೊಂದಿಗೆ ಸಂವಾದ ನಡೆಸಿದ್ದೇನೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬಹುತೇಕ ರೈತರು ದುಃಖ ವ್ಯಕ್ತಪಡಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಳೆ ವಿಮೆ ಕೂಡ ಸರಿಯಾಗಿ ತಲುಪುತ್ತಿಲ್ಲ. ಎಲ್ಲ ರೀತಿಯಿಂದಲೂ ರೈತರು ಸಂಕಷ್ಟದಲ್ಲಿದ್ದೇವೆ. ಸರ್ಕಾರದ ನೆರವು ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಖಾಶೆಂಪುರ್ ರವರು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.