ಗಂಗಾವತಿ: ಪಕ್ಷದ ಹೈಕಮಾಂಡ್ ಏನೇ ನಿರ್ಧಾರ ತಳೆದರೂ ಅದಕ್ಕೆ ನಾನು ಬದ್ಧ. ಮಾಧ್ಯಮದವರೊಂದಿಗೆ ಮಾತನಾಡಿ, ಎಲೆಕ್ಷನ್ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅತ್ತಿಂದಿತ್ತ ಪಕ್ಷಾಂತರ ಮಾಡುವುದು ಸಹಜ. ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳಲಾರೆ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಸಹಜ ಪ್ರಕ್ರಿಯೆ, ಜನಾರ್ದನ ರೆಡ್ಡಿ ವಿರುದ್ಧ ರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಚಿಂತನೆ ಕೇವಲ ಚರ್ಚೆ ಮಾತ್ರ ಎಂದರು.
ನಮ್ಮ ಬಿಜೆಪಿಯ ಬಹಳಷ್ಟು ಜನ ರೆಡ್ಡಿಯ ಕೆಆರ್ ಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ವದಂತಿ ಸೃಷ್ಟಿಸಲಾಗಿದೆ. ಆದರೆ ಕೇವಲ ನಾಲ್ಕೈದು ಜನ ಬಿಟ್ಟರೆ ಬೇರೆ ಯಾರೂ ಪ್ರಮುಖ ನಾಯಕರು ರೆಡ್ಡಿಯ ಪಕ್ಷಕ್ಕೆ ಹೋಗಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿರುವುದರಿಂದ ಯಾರು ಎಲ್ಲಿಯಾದರೂ ಸ್ಪರ್ಧಿಸುವ ಮುಕ್ತ ಅವಕಾಶವಿದೆ ಎಂದರು.
ಟಿಕೆಟ್ ಘೋಷಣೆಯಾಗಿ ಅಭ್ಯರ್ಥಿಗಳು ಅಂತಿಮವಾಗುವವರೆಗೂ ನಾನಾ ಚರ್ಚೆ ನಡೆಯುತ್ತಿರುತ್ತವೆ. ಇದರಲ್ಲಿ ರೆಡ್ಡಿ-ರಾಮುಲು ಸ್ಪರ್ಧೆಯೂ ಇರಬಹುದು. ನಾನು 2023ರ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದರು.