ಸಿದ್ದರಾಮಯ್ಯನ ನಂತರ ರಾಜ್ಯ ಮುನ್ನಡೆಸುವ ತಾಕತ್ತು, ಅರ್ಹತೆ ಸತೀಶ್ ಜಾರಕಿಹೊಳಿಗೆ ಇದೆ : ಹರಿಪ್ರಸಾದ್ ಹೊಸ ಬಾಂಬ್

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಸೃಷ್ಟಿಯ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಯಾರಾಗಬೇಕು ಎಂಬ ಪ್ರಶ್ನೆಗೆ ಪರೋಕ್ಷವಾಗಿ ಉತ್ತರಿಸಿರುವ ಅವರು, ಸಚಿವ ಸತೀಶ್ ಜಾರಕಿಹೊಳಿ ಪರವಾಗಿ ಬಹಿರಂಗವಾಗಿಯೇ ಬ್ಯಾಟಿಂಗ್ ಬೀಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಸಿದ್ದರಾಮಯ್ಯ ಅವರ ನಂತರ ರಾಜ್ಯವನ್ನು ಮುನ್ನಡೆಸುವ ತಾಕತ್ತು ಹಾಗೂ ಅರ್ಹತೆ ಸತೀಶ್ ಜಾರಕಿಹೊಳಿ ಅವರಿಗೆ ಇದೆ ಎಂದು ಹೇಳುವ ಮೂಲಕ, ಮುಂದಿನ ಸಿಎಂ ರೇಸ್ ನಲ್ಲಿ ಜಾರಕಿಹೊಳಿ ಪ್ರಬಲ ಸ್ಪರ್ಧಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ನಾಯಕತ್ವದ ಗುಣಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಹರಿಪ್ರಸಾದ್, ಸತೀಶ್ ಅವರು ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಾಗಿ ಸಮಾಜದ ದಮನಿತರ ದನಿಯಾಗಿದ್ದಾರೆ ಎಂದು ಬಣ್ಣಿಸಿದರು. ಸತೀಶ್ ಜಾರಕಿಹೊಳಿ ಅವರು ಸದಾ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ವರ್ಗಗಳ ಪರವಾಗಿ ದನಿ ಎತ್ತುತ್ತಾ ಬಂದಿದ್ದಾರೆ. ಸಮಾಜದ ದುರ್ಬಲ ವರ್ಗಗಳ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇದೆ. ರಾಜ್ಯದ ಸಮತೋಲಿತ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇಂತಹ ನಾಯಕರು ರಾಜ್ಯಕ್ಕೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪ್ರಜಾಪ್ರಭುತ್ವ ಮತ್ತು ಪಕ್ಷದ ವ್ಯವಸ್ಥೆಯಲ್ಲಿ ನಾಯಕತ್ವ ಬದಲಾವಣೆ ಸಹಜ ಪ್ರಕ್ರಿಯೆ ಎಂಬುದನ್ನು ಹರಿಪ್ರಸಾದ್ ಒತ್ತಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಪಕ್ಷವನ್ನು ಮತ್ತು ಸರ್ಕಾರವನ್ನು ಮುನ್ನಡೆಸಲು ಯಾರಾದರೂ ಒಬ್ಬರು ಉತ್ತರಾಧಿಕಾರಿ ಬೇಕೇ ಬೇಕಲ್ಲವೇ? ಆ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಸೂಕ್ತ ವ್ಯಕ್ತಿ ಎನಿಸಿದರೆ ಅದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಅವರ ನಂತರ ಸತೀಶ್ ಜಾರಕಿಹೊಳಿ ಅವರು ಉತ್ತರಾಧಿಕಾರಿಯಾದರೆ ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಲಿದೆ ಎಂದರು.

ರಾಜ್ಯ ರಾಜಕೀಯದಲ್ಲಿ ಈಗಾಗಲೇ ಮೂವರು ಹೆಚ್ಚುವರಿ ಡಿಸಿಎಂಗಳನ್ನು ನೇಮಕ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಹರಿಪ್ರಸಾದ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ರೇಸ್ ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿರುವಾಗ, ಹರಿಪ್ರಸಾದ್ ಅವರು ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸಿರುವುದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಇದು ಸಿದ್ದರಾಮಯ್ಯ ಬಣದ ಹೊಸ ತಂತ್ರಗಾರಿಕೆಯೇ ಎಂಬ ಅನುಮಾನಗಳೂ ಹುಟ್ಟಿಕೊಂಡಿವೆ.

Leave a Reply

Your email address will not be published. Required fields are marked *