ಹುಬ್ಬಳ್ಳಿ : ಬಿಜೆಪಿಯಲ್ಲಿನ ಅವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಸ್ವ ಇಚ್ಛೆಯಿಂದ ಪಕ್ಷದಿಂದ ಪಕ್ಷಕ್ಕೆ ಹೋದರೆ ಅದು ಆಪರೇಷನ್ ಅಲ್ಲಾ ನಮ್ಮ ಪಕ್ಷಕ್ಕೂ ಬಂದರೂ, ಅದಕ್ಕೆ ಆಪರೇಷನ್ ಹಸ್ತ ಎನ್ನುವ ಅವಶ್ಯಕತೆ ಇಲ್ಲ ಎಂದು ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಬಿಜೆಪಿಯಿಂದ ಹಲವಾರು ಜನರು ಅವರಾಗಿಯೇ ಬರುತ್ತಿದ್ದಾರೆ. ಬಿಜೆಪಿಯ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಪ್ರೆಸ್ ಮೀಟ್ ಕರೆದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಈ ಬಗ್ಗೆ ಅವರೊಂದಿಗೆ ಮಾತನಾಡಿಲ್ಲ. ಇದರ ಕುರಿತು ನಾನು ಏನು ಹೇಳುವುದಕ್ಕೆ ಬರುವುದಿಲ್ಲ ಎಂದರು.
ಇದನ್ನೂ ಓದಿ : ಕಾರಣ ನೀಡದೆ ಪ್ರತಿಭಟನೆ ಮುಂದೂಡಿದ ಬಿಜೆಪಿ; ರಾಜ್ಯ ನಾಯಕರಿಗೆ ಕಾಡ್ತಿದ್ಯಾ ನಾಯಕತ್ವದ ಕೊರತೆ?
ಅವರು ಯಾಕೆ ಸುದ್ದಿಗೋಷ್ಠಿ ಕರೆದಿದ್ದಾರೆ ಅಂತ ಅವರೇ ಹೇಳಬೇಕು, ಬಿಜೆಪಿ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ನಾಯಕನಿಲ್ಲದೆ ಸೊರಗುತ್ತಿದೆ, ಅವಧಿ ಮುಗಿದರೂ ಇದುವರೆಗೂ ಅವರಿಗೆ ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಈ ರೀತಿಯ ಶೋಚನಿಯ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ. ಚೀಟಿ ಎತ್ತುವ ಮೂಲಕ ಹೊರಟ್ಟಿ ಅವರನ್ನು ತಾತ್ಕಾಲಿಕವಾಗಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದಿದ್ದೆ. ರಾಜ್ಯದ ಬಿಜೆಪಿ ನಾಯಕರ ಮೇಲೆ ಕೇಂದ್ರದವರಿಗೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿಯವರನ್ನು ಬರಮಾಡಿಕೊಳ್ಳಲು ಇವರಿಗೆ ಅವಕಾಶ ಇರಲಿಲ್ಲ. ಬಿಜೆಪಿ ರಾಜ್ಯ ನಾಯಕರು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದ್ದಲ್ಲದೆ, ಈಗಿನ ಬಿಜೆಪಿ ದಿನದಿಂದ ದಿನಕ್ಕೆ ಅಧೋಗತಿಗೆ ತೆರಳುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಬಲವಾಗಿ ಬೆಳೆಯುತ್ತಿದೆ. ಪಕ್ಷದ ಸಂಘಟನೆಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಮಿನಿಮಮ್ 15 ಸೀಟ್ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯದ ಗಮನ ಬೇರೆಡೆ ಸೆಳೆಯಲು ಉಡುಪಿಯಲ್ಲಿ ಸುದ್ದಿ ಹಬ್ಬಿಸಿಬಿಟ್ಟರು. ಅಮಿತ್ ಶಾ ಅವರು ನನಗೆ ಕಾಲ್ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ನನಗೆ ಯಾರೊಬ್ಬರು ಕರೆ ಮಾಡಿಲ್ಲ. ಒಟ್ಟಾರೆ ಹಲವಾರು ಜನ ಬಿಜೆಪಿಯಿಂದ ಬಂದೆ ನಮ್ಮ ಪಕ್ಷಕ್ಕೆ ಬರುತ್ತಾರೆ. ಈ ಬಗ್ಗೆ ಬಿಜೆಪಿ ಗ್ರೌಂಡ್ ಲೆವೆಲ್‌ನ ಕಾರ್ಯಕರ್ತರು ನನಗೆ ಕರೆ ಮಾಡಿ ಕೇಳುತ್ತಿದ್ದಾರೆ, ಇದನ್ನೆಲ್ಲಾ ಸಮಯ ಬಂದಾಗ ತಿಳಿಸುತ್ತೇನೆ ಎಂದು ಶೆಟ್ಟರ್ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.