ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಎಂಎಲ್‌ಸಿ ಮಂಜುನಾಥ್ ಭಂಡಾರಿ ಭೇಟಿ ನೀಡಿದ್ದಾರೆ. ಈ ವೇಳೆ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು ಆರೋಪಿಗೆ ಕಠಿಣ ಶಿಕ್ಷೆ ನೀಡುವ ಭರವಸೆ ನೀಡಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರ ಕೊಲೆಗಾರನ ಬಂಧಿಸುವುದಾಗಿ ಎಸ್‌ಪಿ ಭರವಸೆ ನೀಡಿದ್ದಾರೆ. ಕೊಲೆಗಾರ ಮಾನವ ಕುಲಕ್ಕೆ ಕಂಟಕ, ಕಪ್ಪುಚುಕ್ಕಿ. ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಬಾರದು. ಆಡಳಿತ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ಅದನ್ನು ಸರಿಪಡಿಸುತ್ತೇವೆ. ಆರೋಪಿ ಯಾರೇ ಆಗಿರಲಿ ಎಂತವನೇ ಆಗಿರಲಿ, ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ʼಯಡಿಯೂರಪ್ಪ ಮಗ ಎಂದು ವಿಜಯೇಂದ್ರಗೆ ಜವಾಬ್ದಾರಿ ಕೊಟ್ಟಿಲ್ಲʼ
ಗೃಹ ಸಚಿವರ ಸೂಚನೆಯ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ. ಈ ಘಟನೆ ನಡೆದಾಗ ನಾನು ಗೃಹ ಸಚಿವರ ಜೊತೆಗೆ ಇದ್ದೆ. ಉಡುಪಿಗೆ ಬಂದ ತಕ್ಷಣ ಭೇಟಿ ನೀಡಲು ಸೂಚಿಸಿದ್ದರು. ಸುತ್ತಮುತ್ತಲಿನ ಜನರು ಕುಟುಂಬದ ಜೊತೆ ಇದ್ದಾರೆ. ಇದು ಮಾನವ ಕುಲದಲ್ಲೇ ಅತ್ಯಂತ ಹೀನ ಕೃತ್ಯ. ಇದರಲ್ಲಿ ಸರ್ಕಾರಕ್ಕೆ ಒತ್ತಡ ತರಬೇಕಾದ ಅಗತ್ಯ ಇಲ್ಲ. ಗೃಹ ಸಚಿವರು ಕೂಡ ಕುಟುಂಬದ ಜೊತೆಗಿದ್ದಾರೆ. ನಾವೆಲ್ಲ ಒಂದು ಕುಟುಂಬ ಯಾರಿಗೆ ತೊಂದರೆಯಾದರೂ ನನಗೆ ತೊಂದರೆ ಆಗಿದೆ ಎಂದು ಸರ್ಕಾರ ಭಾವಿಸುತ್ತದೆ ಎಂದರು.
ಇದನ್ನೂ ಓದಿ: ದೀಪಾವಳಿ ಮಾಲಿನ್ಯ ತಡೆಯುವಲ್ಲಿ ಗೆದ್ದ ಬೆಂಗಳೂರು: ಅತೀ ಕಡಿಮೆ ಮಾಲಿನ್ಯ ದಾಖಲು
ಈ ವೇಳೆ ಮೃತ ಕುಟುಂಬದ ಸದಸ್ಯ ನೂರ್ ಅಹ್ಮದ್ ಜೊತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ದೂರವಾಣಿ ಕರೆ ಮಾಡಿ ಮಾತನಾಡಿದರು. ಮಂಜುನಾಥ್ ಭಂಡಾರಿ ಮೊಬೈಲ್ ಮೂಲಕ ಕರೆ ಮಾಡಿ ಆತನ ಜೊತೆ ಮಾತನಾಡಿದ್ದು, ಗೃಹ ಸಚಿವರು ಸಹ ಸಾಂತ್ವನ ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.