ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ಆಸ್ಟ್ರೇಲಿಯಾ, ಭಾರತದ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ.
ಈ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ, ಮೂರು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ವೀಕ್ಷಿಸಲಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಂದಿಳಿಯುವರು. ಇಲ್ಲಿಯ ಪಂಚತಾರಾ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾ ವಿವಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ನೀರಜ್ ಬದ್ಗುಜರ್ ಮಾತನಾಡಿ, ಸುಮಾರು 1,32,000 ಲಕ್ಷ ಜನರು ಕುಳಿತು ಪಂದ್ಯ ವೀಕ್ಷಿಸುವ ಸಾಮರ್ಥ್ಯ ಹೊಂದಿರುವ ಕ್ರಿಕೆಟ್ ಸ್ಟೇಡಿಯಂ ಇದಾಗಿದ್ದು, ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣ ಸೇರಿ ನಗರದಾದ್ಯಂತ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.
ಸುಮಾರು 3,000 ಖಾಕಿ ಪಡೆಯನ್ನು ನಿಯೋಜನೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮೊದಲ ದಿನದ ಆಟ ವೀಕ್ಷಿಸಲಿದ್ದಾರೆ. ಈಗಾಗಲೇ ಪೊಲೀಸ್ ಪಡೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಪೂರ್ಣಗೊಳಿಸಿದೆ.