ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಸಮಾವೇಶದಲ್ಲಿ ಕನ್ನಡದಲ್ಲೇ ನರೇಂದ್ರ ಮೋದಿ ಮಾತು ಆರಂಭಿಸಿ, ಎಲ್ಲರ ಕಣ್ಮನ ಸೆಳೆದರು. ಇನ್ನೂ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೆಂಪೇಗೌಡರು ಧರಿಸುತ್ತಿದ್ದ ಮಾದರಿಯ ವಿಶಿಷ್ಟ ಪೇಟ ತೊಡಿಸಿ ಅಭಿನಂದಿಸಿದರು. ಜೊತೆಗೆ ಕೆಂಪೇಗೌಡರ ಬೆಳ್ಳಿ ವಿಗ್ರಹ ನೀಡಿದರು. ಈ ವೇಳೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಹ ಮೋದಿ ಅವರನ್ನು ಆಶೀರ್ವದಿಸಿದರು.
ವೇದಿಕೆಯಲ್ಲಿ ಕನಕದಾಸರು, ಒನಕೆ ಓವಬ್ಬ ಹಾಗೂ ಕೆಂಪೇಗೌಡರ ಚಿತ್ರಪಟಗಳಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದರು. ಸಮಾವೇಶದ ಮೊದಲು ವಿಧಾನಸೌಧದ ಸಮೀಪ ಕನಕದಾಸರು ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ರೈಲು ನಿಲ್ದಾಣಕ್ಕೆ ತೆರಳಿ, ಪ್ರತಿಷ್ಠಿತ ವಂದೇ ಭಾರತ್ ಎಕ್ಸ್ಪ್ರೆಸ್ ಹಾಗೂ ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಚಾಲನೆ ನೀಡಿದರು.
ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಬರಬೇಕಿದ್ದ ಕೆಲ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ಭುವನಹಳ್ಳಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಜನಜಾತ್ರೆಯೇ ನೆರೆದಿದೆ. ಕೆಂಪೇಗೌಡರ ಬೃಹತ್ ಪ್ರತಿಮೆಯನ್ನೂ ಮೋದಿ ಅವರು ಅನಾವರಣಗೊಳಿಸಿದರು. ಇದಕ್ಕೂ ಮೊದಲು ವಿಮಾನ ನಿಲ್ದಾಣದ 2ನೇ ಟರ್ಮಿನಲ್ಗೆ ಚಾಲನೆ ನೀಡಿದರು.
ಕನಕದಾಸರು ಒಂದು ಕಡೆಯಿಂದ ಕೃಷ್ಣನ ಭಕ್ತಿಯ ಮಾರ್ಗ ತೋರಿದರು. ಮತ್ತೊಂದೆಡೆ ‘ಕುಲಕುಲವೆಂದು ಹೊಡೆದಾಡದಿರಿ’ ಎಂದರು. ‘ರಾಮಧಾನ್ಯ ಚರಿತ್ರೆ’ ಮೂಲಕ ಕಿರುಧಾನ್ಯವಾದ ರಾಗಿಯ ಉದಾಹರಣೆ ನೀಡಿ ಸಾಮಾಜಿಕ ಸಮಾನತೆಯ ಸಂದೇಶ ನೀಡಿದರು.