ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಆರೋಪದಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಗುಜರಾತ್‍ನ 8 ಮಂದಿಯನ್ನು ಬಂಧಿಸಲಾಗಿದ್ದು, 185 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎಪಿ, ಪ್ರಧಾನಿ ವಿರುದ್ಧ ದೇಶಾದ್ಯಂತ ಪೋಸ್ಟರ್ ಅಭಿಯಾನ ಆರಂಭಿಸಿ `ಮೋದಿ ಹಟಾವೋ, ದೇಶ್ ಬಚಾವೋ’ ಅಭಿಯಾನ ಆರಂಭಿಸಿದ ಕೇವಲ ಒಂದು ದಿನದ ನಂತರ ಈ ಬಂಧನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಸರ್ಕಾರಿ ಆಸ್ತಿಗೆ ಹಾನಿ ಮಾಡಲು ಪ್ರಯತ್ನಿಸಿದ್ದರು ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್ ಪೊಲೀಸರ ಪ್ರಕಾರ, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ಎಎಪಿಯ “ಮೋದಿ ಹಟಾವೋ, ದೇಶ್ ಬಚಾವೋ” ಅಭಿಯಾನವನ್ನು 11 ಭಾಷೆಗಳಲ್ಲಿ ಪ್ರಾರಂಭಿಸಲಾಯಿತು. ಇಂಗ್ಲಿಷ್, ಹಿಂದಿ ಮತ್ತು ಉರ್ದು ಜೊತೆಗೆ, ಗುಜರಾತಿ, ಪಂಜಾಬಿ, ತೆಲುಗು, ಬೆಂಗಾಲಿ, ಒರಿಯಾ, ಕನ್ನಡ, ಮಲಯಾಳಂ ಮತ್ತು ಮರಾಠಿಯಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ಬ್ರಿಟಿಷರ ವಿರುದ್ಧ ಪೋಸ್ಟರ್ ಹಾಕುವವರನ್ನು ಬಂಧಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.