ನವದೆಹಲಿ : ‘ಲಡಾಖ್ ನಲ್ಲಿ ಚೀನಾ ಭಾರತದ ಒಂದಿಂಚು ಭೂಮಿಯನ್ನೂ ವಶಪಡಿಸಿಕೊಂಡಿಲ್ಲ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಸುಳ್ಳು, ಇದನ್ನು ನಾನು ವರ್ಷಗಳಿಂದ ಹೇಳುತ್ತಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಲೋಕಾರ್ಪಣೆಗೆ ಮೈಸೂರಿಗೆ ಆಗಮಿಸುವಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಷಯ್ ಚಿನ್ ಪ್ರದೇಶ ತನ್ನದೆಂದು ಚೀನಾ ಸ್ಟ್ಯಾಂಡರ್ಡ್ ಮ್ಯಾಪ್ ಬಿಡುಗಡೆ ಮಾಡಿದೆ. ಇದು ತುಂಬಾ ಗಂಭೀರ ವಿಷಯ. ಈ ಕುರಿತು ಪ್ರಧಾನಿ ಮಾತನಾಡಬೇಕು ಎಂದು ಆಗ್ರಹಿಸಿದರು.
ಕಳೆದ ವಾರ ಲಡಾಖ್ ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡುವಾಗ ‘ಚೀನಾ ಭಾರತದ ಒಂದಿಂಚು ಭೂಮಿಯನ್ನೂ ವಶಪಡಿಸಿಕೊಂಡಿಲ್ಲ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಸುಳ್ಳು’ ಎಂದಿದ್ದರು. ಅದೇ ಮಾತನ್ನು ರಾಹುಲ್ ಪುನರುಚ್ಛಿಸಿದ್ದಾರೆ.
ಇದನ್ನೂ ಓದಿ : ಜೈಲು ಶಿಕ್ಷೆ ರದ್ದಾದರೂ ಇಮ್ರಾನ್ ಖಾನ್ ಗೆ ಸಿಗದ ಬಿಡುಗಡೆ ಭಾಗ್ಯ!
ಗಡಿ ವಿಚಾರದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದ್ದು, ಭಾರತದ ಅರುಣಾಚಲ ಪ್ರದೇಶ ರಾಜ್ಯವನ್ನು ಸೇರಿಸಿ ತನ್ನ ನಕ್ಷೆ ಬಿಡುಗಡೆ ಮಾಡಿದೆ. ಚೀನಾ ಬಿಡುಗಡೆ ಮಾಡಿರುವ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ, ಅಕ್ಷಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಪ್ರದೇಶಗಳು ಒಳಗೊಂಡಿವೆ. ಇದು ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.