ಬೆಂಗಳೂರು : ಚಂದ್ರಯಾನ-3ರ ಯಶಸ್ಸಿನ ಹಿನ್ನೆಲೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26ರ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ಅದ್ದೂರಿ ಸ್ವಾಗತ ಕೋರಲು ಬಿಜೆಪಿ ಪ್ಲಾನ್ ಮಾಡಿದೆ.
ಮೋದಿ ಆಗಮನದ ವೇಳೆ ಹೆಚ್ಎಎಲ್ ವಿಮಾನ ನಿಲ್ದಾಣ ಮತ್ತು ಇಸ್ರೋ ಕಚೇರಿಯ ಬಳಿ ರೋಡ್ ಶೋಗೆ ಬಿಜೆಪಿ ಚಿಂತನೆ ನಡೆಸಿದೆ. ಈ ಸಂಬಂಧ ಇಂದು (ಆಗಸ್ಟ್ 24) ಸಂಜೆ 5 ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.
ಅದ್ದೂರಿ ಸ್ವಾಗತಕ್ಕೆ ರಾಜ್ಯ ಬಿಜೆಪಿ ಪ್ಲಾನ್ : ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ ಕೋರುವ ಬಗ್ಗೆ ಮಾಜಿ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದು, ಮೋದಿಯವರು ನಾಡಿದ್ದು ಬೆಂಗಳೂರಿಗೆ ಬರ್ತಿದ್ದಾರೆ. ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ನಾವು ಸ್ವಾಗತಿಸುತ್ತೇವೆ. ಪ್ರಧಾನಿಯ ಸ್ವಾಗತಕ್ಕೆ ಐದಾರು ಸಾವಿರ ಜನ ಸೇರಲಿದ್ದಾರೆ. ಅಲ್ಲಿ ಪ್ರಧಾನಿ ಎಲ್ಲರನ್ನು ಉದ್ದೇಶಿಸಿ ಮಾತಾಡಬಹುದು ಎಂದು ತಿಳಿಸಿದರು.
ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಮೋದಿಯವರು ಆಗಮಿಸಿದಾಗ ಆ ಪ್ರದೇಶದಲ್ಲಿ ರೋಡ್ ಶೋ ಮಾಡ್ತೇವೆ. ಈ ಬಗ್ಗೆ ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ. ಒಂದು ಕಿ.ಮೀವರೆಗೆ ರೋಡ್ ಶೋ ನಡೆಯಲಿದೆ. ಈ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜೊತೆ ಚರ್ಚೆ ಮಾಡಿದ್ದೇವೆ. ಮೋದಿಯವರ ಭೇಟಿಯ ದಿನದ ಕಾರ್ಯಕ್ರಮಗಳ ಬಗ್ಗೆಯೂ ಚರ್ಚೆ ನಡೆಸುತ್ತೇವೆ ಎಂದು ಆರ್. ಅಶೋಕ್ ಹೇಳಿದರು.
ಇದನ್ನೂ ಓದಿ : ಇಸ್ರೋ ಕೇಂದ್ರಕ್ಕೆ ಸಿಎಂ ಭೇಟಿ; ವಿಜ್ಞಾನಿಗಳಿಗೆ ಸಿಹಿಹಂಚಿ ಅಭಿನಂದನೆ!
ಚಂದ್ರಯಾನ-3ರ ಯಶಸ್ಸಿನ ಹಿನ್ನೆಲೆ ಈಗಾಗಲೇ ಇಸ್ರೋ ಕಚೇರಿಗೆ ವಿಧಾಸಭೆ ಸಭಾಧ್ಯಕ್ಷ ಯು.ಟಿ ಖಾದರ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಶಾಸಕ ಆರ್.ಅಶೋಕ್‌ರಿಂದ ವಿಶೇಷ ಪೂಜೆ : ಚಂದ್ರಯಾನ ಯಶಸ್ವಿ ಹಿನ್ನೆಲೆ ಪದ್ಮನಾಭನಗರದ ದೇವಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸಕ ಆರ್ ಅಶೋಕ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಇಸ್ರೋ ಕಚೇರಿಗೆ ಭೇಟಿ ನೀಡಿ ಚಂದ್ರಯಾನ ಯೋಜನೆಯ ತಂಡದಲ್ಲಿದ್ದ ವಿಜ್ಞಾನಿಗಳಿಗೆ ಹಾರ ಹಾಕಿ, ಶಾಲು ಹೊದಿಸಿ ಅಭಿನಂದಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.