ನವದೆಹಲಿ: ಲೋಕಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷಗಳು ಸಿದ್ಧತೆಯಲ್ಲಿವೆ. ಬಿಜೆಪಿ ಮಣಿಸಲು ವಿಪಕ್ಷಗಳು I.N.D.I.A ಒಕ್ಕೂಟ ರಚಿಸಿದ್ದರೆ, ವಿಪಕ್ಷಗಳ ಕಟ್ಟಿಹಾಕಲು ಬಿಜೆಪಿ ತನ್ನ ಎನ್‌ಡಿಎ ಒಕ್ಕೂಟದ ಬಲ ಹೆಚ್ಚಿಸಲು ಮುಂದಾಗಿದೆ. ಆದರೆ ಈ ನಡುವೆ ಹೊರಬಿದ್ದಿರುವ ಸಮೀಕ್ಷೆಯೊಂದು ಎನ್‌ಡಿಎಗೆ ಫುಲ್ ಮಾರ್ಕ್ಸ್ ಕೊಟ್ಟಿದೆ.
ಸಮೀಕ್ಷೆಯ ಪ್ರಕಾರ, ಇಂದು ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ 306 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ನೇಷನ್ ಸಮೀಕ್ಷೆ ವರದಿಯಂತೆ ಇಂದು ಚುನಾವಣೆ ನಡೆದರೆ ಎನ್‌ಡಿಎ 306 ಸ್ಥಾನ ಹಾಗೂ I.N.D.I.A ಮೈತ್ರಿಕೂಟ 193 ಸ್ಥಾನ ಗೆಲ್ಲಲಿದೆ. ಜೊತೆಗೆ 44 ಸ್ಥಾನಗಳನ್ನು ಇತರೆ ರಾಜಕೀಯ ಪಕ್ಷಗಳು ಗೆಲ್ಲಲಿವೆ ಎಂದು ಅಂದಾಜಿಸಿದೆ.
ಇದನ್ನೂ ಓದಿ: ಹಳೆಯ ಮನೆಗೆ ವಾಪಸ್ಸಾಗಲು ನಿರಾಕರಿಸಿದ ರಾಹುಲ್
2023ರ ಜನವರಿಯಲ್ಲಿ ನಡೆದಿದ್ದ MOTN (ಮೂಡ್ ಆಫ್ ದಿ ನೇಷನ್) ಸಮೀಕ್ಷೆಯಲ್ಲಿ ಎನ್‌ಡಿಎ 298 ಸ್ಥಾನ ಗೆಲ್ಲಲಿದೆ ಎಂದಿತ್ತು. ಆದರೆ ಈಗಿನ ಸಮೀಕ್ಷೆಯಲ್ಲಿ 8 ಸ್ಥಾನಗಳು ಹೆಚ್ಚಳವಾಗಿದೆ. ಈ ನಡುವೆ I.N.D.I.A ಮೈತ್ರಿಕೂಟದ ಸ್ಥಾನದಲ್ಲೂ ಭಾರೀ ಜಿಗಿತ ಕಂಡಿದೆ. ಜನವರಿಯ ಸಮೀಕ್ಷೆಯು ಮೈತ್ರಿಕೂಟ 153 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿತ್ತು. ಹೊಸ ಸಮೀಕ್ಷೆಯಲ್ಲಿ 193ಕ್ಕೆ ಏರಿಕೆ ಕಂಡಿದೆ.
ಮತ ಹಂಚಿಕೆಗೆ ಸಂಬಂಧಿಸಿದಂತೆ ಎನ್‌ಡಿಎ ಶೇ.43ರಷ್ಟು ಮತಗಳನ್ನು ಪಡೆಯಲಿದೆ, ಆದರೆ ಇಂಡಿಯಾ ಶೇ.41ರಷ್ಟು ಮತಗಳನ್ನು ಗಳಿಸಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: 40 ವರ್ಷದ ಬಳಿಕ ಗ್ರೀಸ್‌ಗೆ ಭಾರತದ ಪ್ರಧಾನಿ ಪ್ರವಾಸ!
MOTN ಸಮೀಕ್ಷೆಯ ಪ್ರಕಾರ, ಭಾರತೀಯ ಜನತಾ ಪಕ್ಷ (ಬಿಜೆಪಿ) 287 ಸ್ಥಾನಗಳನ್ನು ತನ್ನ ಚಿಹ್ನೆಯಡಿಯಲ್ಲಿ ಗೆಲ್ಲಲಿದೆಯಂತೆ. 272ರ ಸರಳ ಬಹುಮತಕ್ಕೆ ಅಗತ್ಯಕ್ಕಿಂತ 15 ಹೆಚ್ಚು ಸ್ಥಾನ ಬಿಜೆಪಿ ಏಕಾಂಗಿಯಾಗಿ ಗೆಲ್ಲಲಿದೆ ಎಂದಿದೆ. ಇತ್ತ ಕಾಂಗ್ರೆಸ್ ಸ್ವತಂತ್ರವಾಗಿ 74 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದಿದೆ.
ರಾಜ್ಯದಲ್ಲಿಯೂ ಅರಳಲಿದೆ ಕಮಲ!
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿಗೆ 23, ಕಾಂಗ್ರೆಸ್ 5 ಸ್ಥಾನ ಗೆಲ್ಲಲಿದೆ ಎಂದಿದೆ. ಮತಗಳ ಹಂಚಿಕೆಯಲ್ಲಿ ಬಿಜೆಪಿಗೆ ಶೇ.44ರಷ್ಟು ಹಾಗೂ ಕಾಂಗ್ರೆಸ್‌ಗೆ ಶೇ.34ರಷ್ಟು ಮತಗಳು ಬರಲಿದೆ ಎಂದು ತಿಳಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.