ಪಾಟ್ನಾ : ಆಗಸ್ಟ್ ಅಂತ್ಯಕ್ಕೆ ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ‘ಇಂಡಿಯಾ ಮೈತ್ರಿಕೂಟ’ಕ್ಕೆ ಇನ್ನಷ್ಟು ಪಕ್ಷಗಳು ಸೇರುವ ಸಾಧ್ಯತೆ ಇದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಇಂಡಿಯಾ ಒಕ್ಕೂಟದ ಕಾರ್ಯತಂತ್ರಗಳ ಕುರಿತು ಚರ್ಚಿಸುತ್ತೇವೆ. ಸೀಟು ಹಂಚಿಕೆಯಂತಹ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಇತರ ಕಾರ್ಯಸೂಚಿಗಳನ್ನು ಅಂತಿಮಗೊಳಿಸಲಾಗುವುದು ಎಂದರು.
ಇದನ್ನೂ ಓದಿ : ಪಕ್ಷಾಂತರಿಗಳ ವಿರುದ್ಧ ಪವಾರ್ ‘ಗೆರಿಲ್ಲಾ ಯುದ್ಧ ತಂತ್ರ’ ಅನುಸರಿಸುತ್ತಿದ್ದಾರೆ: ಸಂಜಯ್ ರಾವುತ್
ಇನ್ನೂ ಕೆಲವು ರಾಜಕೀಯ ಪಕ್ಷಗಳು ನಮ್ಮ ಒಕ್ಕೂಟವನ್ನು ಸೇರಿಕೊಳ್ಳಲಿವೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಗರಿಷ್ಠ ಸಂಖ್ಯೆಯ ಪಕ್ಷಗಳನ್ನು ಒಗ್ಗೂಡಿಸಲು ನಾನು ಇಚ್ಛಿಸುತ್ತೇನೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಬಗ್ಗೆ ನನಗೆ ಯಾವುದೇ ಆಸೆ ಇಲ್ಲ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ, ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಒಕ್ಕೂಟದ ಮೊದಲ ಸಭೆ ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ಮತ್ತು ಎರಡನೇ ಸಭೆ ಜುಲೈ 17 ಮತ್ತು18ರಂದು ಬೆಂಗಳೂರಿನಲ್ಲಿ ನಡೆದಿದೆ. ಎರಡನೇ ಸಭೆಯಲ್ಲಿ ಒಕ್ಕೂಟದ ಹಳೆಯ ಹೆಸರು ಯುಪಿಎ ಬದಲಿಸಿ ‘ಇಂಡಿಯಾ’ ಎಂದು ಮರುನಾಮಕರಣ ಮಾಡಲಾಗಿದೆ. ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ನಿಗದಿಯಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.