ಬೆಂಗಳೂರು: ಗೂಡ್ಸ್ ಸಾಗಾಣಿಕೆ ಟ್ರಕ್‌ಗಳಿಗೆ ಲೈಫ್ ಟೈಂ ಟ್ಯಾಕ್ಸ್ ಪಾವತಿಗೆ ಸರ್ಕಾರ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ಲಾರಿ ಮಾಲೀಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 250ಕ್ಕೂ ಹೆಚ್ಚು ಟ್ರಕ್‌ಗಳನ್ನು ಆರ್‌ಟಿಒ ಕೇಂದ್ರ ಕಚೇರಿ ಮುಂದೆ ನಿಲ್ಲಿಸಲಾಗಿದ್ದು, ಶಾಂತಿನಗರ ಸುತ್ತಮುತ್ತ ವಾಹನ ದಟ್ಟಣೆ ಉಂಟಾಗಿದೆ.
ಸಾರಿಗೆ ಇಲಾಖೆ ಹೊಸ ಆದೇಶದಿಂದ ಗೂಡ್ಸ್ ಟ್ರಕ್ ಮಾಲೀಕರು ಸಿಡಿದೆದ್ದಿದ್ದು, ಶಾಂತಿನಗರ ರಸ್ತೆಯುದ್ದಕ್ಕೂ ಗೂಡ್ಸ್ ವಾಹನಗಳನ್ನು ನಿಲ್ಲಿಸಿ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಇಂದು ಆದೇಶ ವಾಪಸ್ ಪಡೆಯದೇ ಇದ್ದರೆ ಆರ್ ಟಿಓ ಕಛೇರಿಗೆ ಮುತ್ತಿಗೆ ಹಾಕಲು ತಯಾರಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ; ವಿರೋಧದ ನಡುವೆಯೂ ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ!
ಈಗಾಗಲೇ ಶಾಂತಿನಗರದಲ್ಲಿ 250ಕ್ಕೂ ಹೆಚ್ಚು ಎಂಜಿವಿ (ಮೀಡಿಯಂ ಗೂಡ್ಸ್ ವೆಹಿಕಲ್ ) ವಾಹನಗಳನ್ನು ನಿಲ್ಲಿಸಿದ್ದು, ಇನ್ನಷ್ಟು ವಾಹನಗಳನ್ನು ಪ್ರತಿಭಟನಾ ಸ್ಥಳಕ್ಕೆ ತರುವ ಸಾಧ್ಯತೆ ಇದೆ. ಶಾಂತಿನಗರ ಬಸ್ ನಿಲ್ದಾಣದ ಬಳಿಯ ಬಿಟಿಎಸ್ ರಸ್ತೆಯನ್ನು ಬ್ಲಾಕ್ ಮಾಡಿದ್ದು, ಸಮಸ್ಯೆ ಬಗೆಹರಿಯದಿದ್ರೆ ಗಾಡಿಗಳನ್ನ ತೆಗೆಯೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
‘ಬೆಂಗಳೂರಿನಲ್ಲಿ 6 ಸಾವಿರಕ್ಕೂ ಹೆಚ್ಚು ಗೂಡ್ಸ್ ವಾಹನಗಳಿವೆ. ರಾಜ್ಯಾದ್ಯಂತ 6 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ನಾಳೆಯಿಂದ ಪ್ರತಿ ಆರ್‌ಟಿಒ ಮುಂದೆ ವಾಹನಗಳನ್ನ ನಿಲ್ಲಿಸುತ್ತೇವೆ. ಸಮಸ್ಯೆ ಬಗೆಹರಿಸುವ ಬಗ್ಗೆ ಇಂದೇ ನಿರ್ಧಾರವಾಗಬೇಕು; ಇಂದು 10.30ಕ್ಕೆ ಸಭೆ ಇದೆ, ಆ ಬಳಿಕ ನಿರ್ಧಾರ ತಿಳಿಸುತ್ತೇವೆ’ ಎಂದು ಲಾರಿ ಮಾಲೀಕರು ಪ್ರತಿಕ್ರಿಯೆ ನೀಡಿದ್ದಾರೆ.
ಗೂಡ್ಸ್ ಟ್ರಕ್ ಮಾಲೀಕರ ಪ್ರತಿಭಟನೆಯಿಂದ ಶಾಂತಿನಗರ ಬಸ್ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಆರ್‌ಟಿಒ ಆಯುಕ್ತರ ಕಚೇರಿ ಮುಂಭಾಗ ಮಾಲೀಕರು ಜಮಾಯಿಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಪೊಲೀಸರು ಅಲರ್ಟ್ ಆಗಿದ್ದಾರೆ. ಶಾಂತಿನಗರ ಆರ್‌ಟಿಒ ಕಚೇರಿಗೆ ಪೊಲೀಸ್ ಬಿಗಿಭದ್ರತೆ ನೀಡಲಾಗಿದೆ.
ಇದನ್ನೂ ಓದಿ; ಹೆಚ್‌ಡಿಕೆ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಸ್ವಾಮೀಜಿ
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ, ‘ಏಕಾಏಕಿ ಪ್ರತಿಭಟನೆ ಮಾಡುವ ಅವಶ್ಯಕತೆ ಇರ್ಲಿಲ್ಲ. ಆದರೆ, ಇವತ್ತು ಟ್ಯಾಕ್ಸ್ ಕಟ್ಟೊದಕ್ಕೆ ಕೊನೆ ದಿನ ಇದೆ. ಇವತ್ತು ನಾವು ಗಾಡಿ ಓಡಿಸಿದರೆ ದಂಡ ಕಟ್ಟಬೇಕಾಗುತ್ತೆ. ಭಾರತದಲ್ಲಿ ಎಲ್ಲಿಯೂ ಇಲ್ಲದೇ ಇರೋ ಕಾನೂನನ್ನ ನಮ್ಮಲ್ಲಿ ತಂದಿದ್ದಾರೆ. ಲೈಪ್ ಟೈಮ್ ಟ್ಯಾಕ್ಸ್ ಅನ್ನ ತಡೆ ಹಿಡಿಯಬೇಕು. ಹಳೆಯ ವೆಹಿಕಲ್ ಗಳಿಗೆ ₹60-₹70ಸಾವಿರ ಟ್ಯಾಕ್ಸ್ ಹಾಕಿದ್ರೆ ಕಟ್ಟೋಕಾಗುತ್ತಾ? ಸರ್ಕಾರ ಇಂದೇ ತಿರ್ಮಾನ ತೆಗೆದು ಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಹಿಂದೆಲ್ಲಾ ವರ್ಷಕ್ಕೆ ₹8ಸಾವಿರ ಟ್ಯಾಕ್ಸ್ ಕಟ್ಟುತ್ತಿದ್ದೆವು. ಈಗ ₹80ಸಾವಿರ ಕಟ್ಟೋದಕ್ಕೆ ಹೇಳ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಹಲವಾರು ಸಲ ಮನವಿ ಮಾಡಿದ್ದೇವೆ. ಅವರು ಈ ಬಗ್ಗೆ ಗಮನಹರಿಸಬೇಕು. ಸಿಎಂ ಕರೆದ್ರೆ ನಾವು ಮಾತುಕತೆಗೆ ಹೊಗ್ತೇವೆ. ಇವತ್ತು 5ಗಂಟೆಯವರೆಗೂ ಸಮಯಾವಕಾಶ ಕೊಡ್ತೇವೆ. ಸಮಸ್ಯೆ ಬಗೆಹರಿಯದಿದ್ದರೆ ನಾಳೆ ರಾಜ್ಯದಾದ್ಯಂತ ಹೆದ್ದಾರಿ ತಡೆದು ಪ್ರತಿಭಟನೆ ಮಾಡ್ತೇವೆ; ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆಯಾದಲ್ಲಿ ನಾವು ಜವಾಬ್ದಾರರಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.