Tuesday, November 28, 2023
spot_img
- Advertisement -spot_img

‘ಕೈ’ ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಇಂದೇ ಲಾಸ್ಟ್‌ಡೇಟ್‌, ಈಗಾಗಲೇ 400 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

ಬೆಂಗಳೂರು: ಕಾಂಗ್ರೆಸ್​ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದು, ಬಹುತೇಕ ಶಾಸಕರು ಇಂದು ಅರ್ಜಿ ಸಲ್ಲಸುವ ಸಾಧ್ಯತೆ ಇದೆ. ಈವರೆಗೆ ಸಾವಿರಾರು ಮಂದಿ ಅರ್ಜಿ ಸ್ವೀಕರಿಸಿದ್ದು ಆ ಪೈಕಿ ಸುಮಾರು 400 ಮಂದಿ ಮಾತ್ರವೇ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 30 ಶಾಸಕರು ಕೂಡಾ ಸೇರಿದ್ದಾರೆ. ಹಲವು ಶಾಸಕರು ಮತ್ತು ಆಕಾಂಕ್ಷಿಗಳು ಇನ್ನೂ ಅರ್ಜಿ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಯ ದಿನಾಂಕ ವಿಸ್ತರಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಕಾಂಗ್ರೆಸ್ ಪಕ್ಷವು ಟಿಕೆಟ್​ಗಾಗಿ ಅರ್ಜಿಗೆ ₹5 ಸಾವಿರ ಹಾಗೂ ₹2 ಲಕ್ಷ ಡಿಡಿ ನೀಡಬೇಕು ಎಂದು ಕಾಂಗ್ರೆಸ್ ಷರತ್ತು ವಿಧಿಸಿದೆ.

ಕೋಲಾರ ಕ್ಷೇತ್ರಕ್ಕೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅರ್ಜಿ ಪಡೆದಿದ್ದರು. ಆದ್ರೆ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾದ ಬಳಿಕ ಅರ್ಜಿ ಸಲ್ಲಿಸಲು ಅವರು ಹಿಂದೇಟು ಹಾಕಿದ್ದಾರೆ. ವಿ.ಆರ್.ಸುದರ್ಶನ್ ಅವರ ಜೊತೆಗೆ ಗೋವಿಂದೆಗೌಡ, ಶ್ರೀನಿವಾಸ್ ಎಂಬುವವರೂ ಕೂಡಾ ಅರ್ಜಿ ಪಡೆದಿದ್ದರು ಎನ್ನಲಾಗಿದೆ. ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಈವರೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ನಂಜನಗೂಡು ಕ್ಷೇತ್ರಕ್ಕೆ ಎಚ್.ಸಿ.ಮಹಾದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅರ್ಜಿ ಸಲ್ಲಿಸಿದ್ದಾರೆ.

ಪುಲಕೇಶಿ ನಗರದಲ್ಲಿ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಇರುವಾಗಲೇ ಮಾಜಿ ಶಾಸಕ ಪ್ರಸನ್ನ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಮೂಡಿಗೆರೆ ಕ್ಷೇತ್ರಕ್ಕೆ ಹಿರಿಯ ನಾಯಕಿ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅರ್ಜಿ ಸಲ್ಲಿಸಿದ್ದಾರೆ. ನಯನ ಮೊಟಮ್ಮ ಜೊತೆಗೆ ನಾಗರತ್ನ, ಬಿನ್ನಾಡಿ ಪ್ರಭಾಕರ್ ಎಂಬುವವರೂ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಎರಡು ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಮಹಾದೇವಪುರ ಹಾಗೂ ಸಕಲೇಶಪುರ ಕ್ಷೇತ್ರಗಳಿಗೆ ಅರ್ಜಿ ಹಾಕಿದ್ದಾರೆ. ಕನಕಗಿರಿ ಕ್ಷೇತ್ರಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ, ಟಿ.ನರಸೀಪುರ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್​.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್, ಎಚ್.ಡಿ.ಕೋಟೆಗೆ ಅರ್ಜಿ ಹಾಕಿದ ಹಾಲಿ ಶಾಸಕ ಅನಿಲ್ ಚಿಕ್ಕಮಾದು, ಮಂಗಳೂರು ದಕ್ಷಿಣಕ್ಕೆ ಐವನ್ ಡಿಸೋಜ, ಮಂಗಳೂರು ಉತ್ತರಕ್ಕೆ ಮೋಯಿದ್ದೀನ್ ಬಾವಾ ಅರ್ಜಿ ಸಲ್ಲಿಸಿದ್ದಾರೆ. ಉಡುಪಿ ಕ್ಷೇತ್ರಕ್ಕೆ ಐವರು ಸ್ಥಳೀಯ ಮೊಗವೀರ ನಾಯಕರು ಅರ್ಜಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾಗಿರುವ ಶಿಗ್ಗಾಂವಿಯಿಂದ ಸೋಮಣ್ಣ ಬೇವಿನ ಮರದ್, ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಲಿರುವ ರಾಮನಗರದಲ್ಲಿ ಸ್ಪರ್ಧಿಸಲು ಇಕ್ಬಾಲ್ ಅರ್ಜಿ ಹಾಕಿದ್ದಾರೆ. ಮಾಜಿ ಸಚಿವೆ ಉಮಾಶ್ರೀ ಕ್ಷೇತ್ರಕ್ಕೆ ಐವರಿಂದ ಅರ್ಜಿ ಬಂದಿವೆ. ಅರಸಿಕೆರೆ ಕ್ಷೇತ್ರದಲ್ಲಿ ಜೆಡಿಎಸ್​ನ ಹಿರಿಯ ನಾಯಕ ಶಿವಲಿಂಗೇಗೌಡ ಕಾಂಗ್ರೆಸ್​ಗೆ ಬರಬಹುದು ಎಂಬ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈವರೆಗೆ ಯಾವುದೇ ಸ್ಥಳೀಯ ನಾಯಕರು ಅರ್ಜಿ ಸಲ್ಲಿಸಿಲ್ಲ.

Related Articles

- Advertisement -spot_img

Latest Articles