ಬೆಂಗಳೂರು: ಬಿಜೆಪಿಯವರು ಕೋಮುಗಲಭೆ ಮಾಡಿಸಲು ಸಿದ್ಧವಾದಂತೆ ಕಾಣುತ್ತಿದೆ. ಬೆಂಗಳೂರು, ಕರಾವಳಿ ಕಡೆ ಕೋಮುಗಲಭೆ ಮಾಡಿಸಲು ತಯಾರಿ ನಡೆಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾಯಕರನ್ನು ನಿಯಂತ್ರಿಸಲು ಆಗದವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ನಾಯಕರಿಗೆ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಹಕ್ಕಿಲ್ಲ. ಪಾಕಿಸ್ತಾನದ ಹೆಸರಿಟ್ಟುಕೊಂಡು ರಾಜಕಾರಣ ಮಾಡುವುದು ಬಿಜೆಪಿ ಪದ್ಧತಿ. ರಾಜಕಾರಣಕ್ಕಾಗಿ ಬಿಜೆಪಿಯವರು ಕೊಲೆಗಳನ್ನು ಸಹ ಮಾಡಿಸುತ್ತಾರೆ. ಯಾರನ್ನು ಬೇಕಾದರೂ ಹೊಡೀತಾರೆ, ಆಪರೇಷನ್ ಬೇಕಾದರೂ ಮಾಡುತ್ತಾರೆ. ಬಿಜೆಪಿಯವರು ನೀಚರು, ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದರು.
ಬಿಜೆಪಿ ನಂಟು ಇರುವುದೆಲ್ಲ ಪಾಕ್ ವಿಚಾರಕ್ಕೆ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಪದೇಪದೆ ಯಾಕೆ ರಾಜ್ಯಕ್ಕೆ ಬರುತ್ತಿದ್ದಾರೆ? ಮನ್ಕೀ ಬಾತ್ನಲ್ಲಿ ಪ್ರಧಾನಿ ಮೋದಿಗೆ ಭ್ರಷ್ಟಾಚಾರ ಕಾಣಿಸ್ತಾ ಇಲ್ವಾ? ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದರು.
ಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಸಮಿತಿ, ರಾಜ್ಯದ ವರಿಷ್ಠರಿಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರ ಚುನಾವಣಾ ಸಮಿತಿಗೆ ಆದಷ್ಟು ಬೇಗ ಪಟ್ಟಿ ಕಳುಹಿಸುತ್ತೇವೆ ಎಂದು ತಿಳಿಸಿದರು.