ದಾವಣೆಗೆರೆ : ‘ನಾನು ಕಾಂಗ್ರೆಸ್ ಸೇರುತ್ತೇನೆ ಅಂತ ಬಿಜೆಪಿಯಲ್ಲೇ ಕೆಲವರು ಅಪಪ್ರಚಾರ ಮಾಡ್ತಿದ್ದಾರೆ’ ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಪ್ರತಿಯೊಂದು ಹಳ್ಳಿಗೂ ತಲುಪಿಸುವ ಕಾರ್ಯವನ್ನು ನಾನು ಮಾಡಿದ್ದೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆಂದು ಹೇಳುತ್ತಿದ್ದೆವು. ಅಂತಹ ನಮಗೆ ಈ ಪರಿಸ್ಥಿತಿ ಬಂದಿದೆ ಎಂದು ಸ್ವಪಕ್ಷದವರ ವಿರುದ್ಧವೇ ಅಸಮಾಧಾನ ಹೊರ ಹಾಕಿದರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ದರೂ ಹೊಸ ಅಧ್ಯಕ್ಷರ ನೇಮಕ ಆಗಿಲ್ಲ. ವಿರೋಧ ಪಕ್ಷದ ನಾಯಕನನ್ನೂ ಆಯ್ಕೆ ಮಾಡಿಲ್ಲ. ಇದರಿಂದ ಯಡಿಯೂರಪ್ಪನವರ ಮನಸ್ಸಿಗೆ ಬಹಳ ನೋವುಂಟಾಗಿದೆ. ಪಕ್ಷದಲ್ಲಿ ಕೆಲವರು ಪತ್ರಿಕಾ ಹೇಳಿಕೆ ನೀಡುವ ಟೈಗರ್ಸ್ ಗಳಾಗಿದ್ದಾರೆ. ಯಡಿಯೂರಪ್ಪನವರನ್ನು ಕಡೆಗಣಿಸಿದ್ದೇ ಪಕ್ಷಕ್ಕೆ ಶಾಪವಾಗಿ ಪರಿಣಮಿಸಿದೆ ಎಂದರು.
ಇದನ್ನೂ ಓದಿ : ‘ನಾಯಕನಿಲ್ಲದ ಬಿಜೆಪಿಯಲ್ಲಿ ಯಾರೂ ಮಾಸ್ ಲೀಡರ್ ಇಲ್ಲ’
ರೇಣುಕಾಚಾರ್ಯ ಬೆಳೆಯುತ್ತಾನೆಂದು ತುಳಿಯುವ ಕೆಲಸ ಮಾಡಿದರು. ನಾನು ಮಾತನಾಡಿದ ತಕ್ಷಣ, ರೇಣುಕಾಚಾರ್ಯ ಪಕ್ಷ ಬಿಡುತ್ತಾನೆ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಯಾರು ರಾಜಕೀಯವಾಗಿ ಬೆಳೆಯುತ್ತಾರೋ ಅವರನ್ನು ಕತ್ತರಿಸುತ್ತಾರೆ. ಯಾರು ಬಕೆಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ. ವಿಜಯೇಂದ್ರ ಅವರಿಗೆ ಸಾಮರ್ಥ್ಯ ಇದೆ. ಆದರೆ, ಅವಕಾಶ ಕೊಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.