ಮಂಡ್ಯ : ಅಭಿಷೇಕ್ ಅಂಬರೀಷ್ ರಾಜಕೀಯಕ್ಕೆ ಬರಲ್ಲ, ಚಾಮುಂಡಿ ತಾಯಿ ಮೇಲಾಣೆ ಕುಟುಂಬ ರಾಜಕೀಯನ್ನೂ ಮಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಸುಮಲತಾ ಆಂಬರೀಷ್ ಬಿಜೆಪಿಗೆ ಸೇರ್ತಾರೆ ಅನ್ನೋ ಮಾತು ಕೇಳಿ ಬಂದ ಹಿನ್ನೆಲೆ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಭಿಷೇಕ್ ರಾಜಕೀಯಕ್ಕೆ ಬರಲ್ಲ, ಆದರೆ ನನ್ನ ಬೆಂಬಲ ಯಾವಾಗಲೂ ಮೋದಿ ಸರ್ಕಾರಕ್ಕೆ ಇರುತ್ತದೆ ಎಂದರು.
ನಾನು ರಾಜಕೀಯ ಪ್ರವೇಶಿಸಿ 4 ವರ್ಷ ಆಗಿದೆ , ರಾಜಕೀಯ ನನ್ನ ಸ್ವಾರ್ಥವಲ್ಲ , ಯಾವ ರೀತಿ ನನ್ನ ಹೆಸರು ಬಳಸಿಕೊಂಡು ಟಾರ್ಗೇಟ್ ಮಾಡಿದ್ದಾರೆ ಅನ್ನೋದು ನಂಗೆ ಗೊತ್ತಿದೆ ಎಂದು ಹೇಳಿದರು. ಸರ್ಕಾರವನ್ನೇ ಎದುರು ಹಾಕಿಕೊಂಡು ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಹೇಳಿದರು.
ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ಸದ್ಯ ಬಿಜೆಪಿ ಸೇರ್ಪಡೆಗೆ ಕೆಲವು ತಾಂತ್ರಿಕ ತೊಂದರೆಗಳಿವೆ. ಮೋದಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅಂಬರೀಶ್ ಹೆಸರಿಗೆ ಕಳಂಕ ತರುವ ಕೆಲಸ ನಾನು ಮಾಡುವುದಿಲ್ಲ. ಈ ಜನ್ಮದಲ್ಲಿ ನಾನೆಂದೂ ಕಳಂಕ ತರುವ ಕೆಲಸ ಮಾಡುವುದಿಲ್ಲ. ನಾನು ರಾಜಕಾರಣ ಬಿಡುತ್ತೇನೆ ಹೊರತು ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಟ್ಟರು ಕೂಡ ನಾನು ಮಂಡ್ಯ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಂದಹಾಗೆ ಸುಮಲತಾ ಒಂದು ವೇಳೆ ಬಿಜೆಪಿ ಸೇರಿದರೆ ಸಂಸದೆ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಅವರು ಕಾನೂನು ತೊಡಕು ಮಾಡಿಕೊಳ್ಳದಿರಲು ತೀರ್ಮಾನಿಸಿ, ಬಿಜೆಪಿಗೆ ಯಾವಾಗಲೂ ಬೆಂಬಲ ಇರುತ್ತದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಗೆ ಇಂದು ಬದಲಾವಣೆಯ ಅಗತ್ಯವಿದೆ. ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಸ್ವಚ್ಛತೆಯ ಅಗತ್ಯವಿದೆ. ಕಲುಷಿತ ರಾಜಕಾರಣ ಸ್ವಚ್ಛತೆಗೊಳಿಸಲು ಅಭಿಯಾನ ನಡೆಸೋಣ ಎಂದು ಹೇಳಿ ಜೆಡಿಎಸ್ ಸೋಲಿಸಲು ಕರೆ ನೀಡಿದರು.