ಬೆಂಗಳೂರು : ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ನಿನ್ನೆ (ಶುಕ್ರವಾರ) ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಎಸ್ ವೈ, ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ. ಜೆಡಿಎಸ್ ಗೆ ನಾಲ್ಕು ಸೀಟ್ ಬಿಟ್ಟು ಕೊಡಲು ಅಮಿತ್ ಶಾ ಒಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರ ಈಗ ಮಂಡ್ಯ ಸಂಸದೆ ಸುಮಲತಾಗೆ ಬಿಗ್ ಶಾಕ್ ನೀಡಿದೆ.
ಸುಮಲತಾಗೆ ಕೈ ತಪ್ಪುತ್ತಾ ಮಂಡ್ಯ ಟಿಕೆಟ್? ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಯಡಿಯೂರಪ್ಪ ಘೋಷಣೆ ಮಾಡುತ್ತಿದ್ದಂತೆ, ಹಲವು ಆಯಾಮಗಳಲ್ಲಿ ಚರ್ಚೆ ಶುರುವಾಗಿದೆ. ಯಡಿಯೂರಪ್ಪ ಹೇಳಿದಂತೆ ಹಾಸನ, ಮಂಡ್ಯ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ಅಮಿತ್ ಶಾ ಒಪ್ಪಿದ್ದಾರೆ. ಒಂದು ವೇಳೆ ಇದು ನಿಜವಾದರೆ, ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿರುವ ಮಂಡ್ಯ ಸಂಸದೆ ಸುಮಲತಾಗೆ ನಿರಾಸೆಯಾಗುವುದು ಖಚಿತ.
ಕ್ಷೇತ್ರ ಬದಲಿಸುತ್ತಾರಾ ಸುಮಲತಾ? ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟರೆ ಬಿಜೆಪಿಗೆ ಬೆಂಬಲ ಕೊಟ್ಟು ಟಿಕೆಟ್ ನಿರೀಕ್ಷೆಯಲ್ಲಿರುವ ಸುಮಲತಾ ಅವರಿಗೆ ಟಿಕೆಟ್ ಕೈ ತಪ್ಪಲಿದೆ. ಹಾಗಾಗಿ, ಸುಮಲತಾ ಕ್ಷೇತ್ರ ಬದಲಿಸಬಹುದು. ಮೂಲಗಳ ಪ್ರಕಾರ, ಸುಮಲತಾ ಅವರು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಸುಮಲತಾ ಬೆಂಗಳೂರು ದಕ್ಷಿಣಕ್ಕೆ ಬಂದರೆ, ಅಲ್ಲಿನ ಪ್ರಸ್ತುತ ಸಂಸದರಾಗಿರುವ ತೇಜಸ್ವಿ ಸೂರ್ಯಗೆ ಬಿಜೆಪಿ ಯಾವ ಕ್ಷೇತ್ರ ಕೊಡಲಿದೆ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುತ್ತಾ?, ಸುಮಲತಾ ಅವರಿಗೇ ಟಿಕೆಟ್ ಕೊಡುತ್ತಾ? ಸುಮಲತಾ ಮಂಡ್ಯದಿಂದಲೇ ಮತ್ತೊಮ್ಮೆ ಪಕ್ಷೇತರಾಗಿ ಕಣಕ್ಕಿಳಿಯುತ್ತಾರಾ? ಇಲ್ಲ ಬೆಂಗಳೂರಿಗೆ ಶಿಫ್ಟ್ ಆಗ್ತಾರಾ? ಇತ್ಯಾದಿ ಪ್ರಶ್ನೆಗಳು ಎದ್ದಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.