Thursday, September 28, 2023
spot_img
- Advertisement -spot_img

ಮುನಿಸು ಮರೆತು ಒಂದಾಗ್ತಾರಾ ದರ್ಶನ್-ಸುದೀಪ್ : ಮರು ಸಂಗಮದ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ?

ಬೆಂಗಳೂರು : ಪರಸ್ಪರ ಮುನಿಸಿಕೊಂಡಿದ್ದ ಸ್ಯಾಂಡಲ್ ವುಡ್ ನಟರಾದ ಸುದೀಪ್ ಮತ್ತು ದರ್ಶನ್ ಸುದೀರ್ಘ ಸಮಯದ ಬಳಿಕ ಮತ್ತೆ ಒಂದಾಗುವ ಲಕ್ಷಣ ಕಾಣ್ತಿದೆ. ಇಬ್ಬರು ಸ್ಟಾರ್ ನಟರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಇಂದು ತನ್ನ 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಪ್ರಯುಕ್ತ ಆಪ್ತರಿಗಾಗಿ ನಗರದ ಐಷಾರಾಮಿ ಹೋಟೆಲ್ ನಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಸುದೀಪ್ ಮತ್ತು ದರ್ಶನ್ ಮುಖಾಮುಖಿಯಾಗಿದ್ದಾರೆ.

ಮರು ಸಂಗಮದ ಹಿಂದೆ ಇದೆಯಾ ರಾಜಕೀಯ ಲೆಕ್ಕಾಚಾರ ?: ಸುಮಾರು 6 ವರ್ಷಗಳ ಬಳಿಕ ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆಯ ಹಿಂದೆ ಸಂಸದೆ ಸುಮಲತಾ ಅವರ ರಾಜಕೀಯ ಲೆಕ್ಕಾಚಾರ ಇದೆ ಎಂದು ಹೇಳಲಾಗ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ ಸುಮಲತಾ ಅಂಬರೀಶ್, ಈ ಬಾರಿಯ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯನ್ನು ಬೆಂಬಲಿಸಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿರುವ ಬಿಜೆಪಿ, ಸುಮಲತಾ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೆ ಸುಮಲತಾ ಬಿಜೆಪಿ ಟಿಕೆಟ್ ಪಡೆದರೆ ದರ್ಶನ್ ಮತ್ತು ಸುದೀಪ್ ಪ್ರಚಾರ ಮಾಡುವ ಸಾಧ್ಯತೆ ಇದೆ.

2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಗೆಲುವು ದಾಖಲಿಸುವುದು ಅನಿವಾರ್ಯವಾಗಿತ್ತು, ಅಷ್ಟೇ ಸವಾಲು ಕೂಡ ಇತ್ತು. ಆ ವೇಳೆ ದರ್ಶನ್ ಮತ್ತು ಯಶ್ ಜೋಡೆತ್ತುಗಳಂತೆ ಪ್ರಚಾರ ಮಾಡಿ ಸುಮಲತಾ ಅವರ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮುಂದಿನ ಚುನಾವಣೆಯಲ್ಲೂ ಅದೇ ರೀತಿ ಸುದೀಪ್ ಮತ್ತು ದರ್ಶನ್ ಪ್ರಚಾರ ಮಾಡುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಇಬ್ಬರು ನಟರನ್ನು ಸುಮಲತಾ ಅವರೇ ಒಂದು ಮಾಡಿಸಿದ್ದಾರೆ ಎಂದು ಹೇಳಲಾಗ್ತಿದೆ.

ಸುದೀಪ್-ದರ್ಶನ್ ಬಂದ್ರೆ ಸುಮಲತಾಗೆ ಲಾಭ : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕಿಚ್ಚ ಸುದೀಪ್ ಅಬ್ಬರದ ಪ್ರಚಾರ ಮಾಡಿದ್ದರು. ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗಿ ಸುದೀಪ್ ಪ್ರಚಾರ ಮಾಡಿದ್ದ ಕೆಲ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ದರ್ಶನ್ ಮೊದಲಿಂದಲೂ ಎಲ್ಲಾ ಪಕ್ಷಗಳ ಪರ ಪ್ರಚಾರ ಮಾಡ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಆರ್. ಆರ್ ನಗರದಲ್ಲಿ ಮುನಿರತ್ನ ಪರ ಪ್ರಚಾರ ಮಾಡಿ, ಮುನಿರತ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆ ಸ್ಟಾರ್ ನಟರಿಂದ ಪ್ರಚಾರದ ಲಾಭ ಪಡೆಯಲು ಸುಮಲತಾ ಅವರು ಈಗಲೇ ಸಿದ್ಧತೆ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles