ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶಿವ ದೇವಾಲಯಕ್ಕೆ ಭೇಟಿ ನೀಡಿ, ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರು. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪೂಂಚ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನವಗ್ರಹ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲೆಗೆ 2 ದಿನಗಳ ಭೇಟಿ ನೀಡಿರುವ ಮುಫ್ತಿ, ನವಗ್ರಹ ದೇವಸ್ಥಾನಕ್ಕೆ ಬಂದರು.
ಇಡೀ ದೇವಾಲಯವನ್ನು ಪ್ರದಕ್ಷಿಣೆ ಹಾಕಿದ್ದಲ್ಲದೆ, ಶಿವಲಿಂಗಕ್ಕೆ ಜಲಾಭಿಷೇಕವನ್ನೂ ನೆರವೇರಿಸಿದರು. ಆ ಬಳಿಕ ದೇವಾಲಯದ ಆವರಣದಲ್ಲಿರುವ ಬಾನಿ ಯಶಪಾಲ್ ಶರ್ಮಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಮೆಹಬೂಬಾ ಮುಫ್ತಿ ದೇವಸ್ಥಾನಕ್ಕೆ ಭೇಟಿ ನೀಡಿರುವುದನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಇದೊಂದು ರಾಜಕೀಯ ಗಿಮಿಕ್. ಸಾಫ್ಟ್ ಹಿಂದುತ್ವದ ಮೂಲಕ ಜನರನ್ನು ಓಲೈಸಲು ಸಾಧ್ಯವಿಲ್ಲ ಎಂದು ಹೇಳಿದೆ.ಇಂದು ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಕೇವಲ ರಾಜಕೀಯ ಗಿಮಿಕ್ ಆಗಿದೆ. ಅದು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ.
ರಾಜಕೀಯ ಗಿಮಿಕ್‌ಗಳು ಬದಲಾವಣೆಗಳನ್ನು ತರುವುದಾದಲ್ಲಿ ಜಮ್ಮು ಮತ್ತು ಕಾಶ್ಮೀರ ಸಮೃದ್ಧಿಯ ತೋಟವಾಗಿರುತ್ತಿತ್ತು ಎಂದು ಬಿಜೆಪಿ ವಕ್ತಾರ ರಣಬೀರ್ ಸಿಂಗ್ ಪಠಾನಿಯಾ ಹೇಳಿದರು.