ಕಲಬುರಗಿ : ದೇಶದಾದ್ಯಂತ ಇಂದು ಸೋದರತ್ವ ಸಾರುವ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಹೆಣ್ಣು ಮಕ್ಕಳು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಿದ್ದಾರೆ.
ನಗರದ ಎಸ್.ಕೆ ಮಿಲ್ ಅಜ್ಮೀರಿ ಲೇಔಟ್ ನಲ್ಲಿ ಮುಸ್ಲಿಂ ಮಹಿಳೆಯರು ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅವರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಸೋದರತ್ವ ಸಾರಿದರು. ಸಂಸದ ಜಾಧವ್ ಸ್ವತಃ ತಾವೇ ಅಜ್ಮೀರಿ ಲೇಔಟ್ ಗೆ ಹೋಗಿ ಮುಸ್ಲಿಂ ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡಿರುವುದು ವಿಶೇಷ. ಸಂಸದರಿಗೆ ಅಜ್ಮೀರಿ ಲೇಔಟ್ ನ ಹಿರಿಯರು, ಬಿಜೆಪಿ ಮುಖಂಡರು ಸಾಥ್ ನೀಡಿದರು.
ಜುಲೈ 31ರಂದು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರಿಂದ ರಾಖಿ ಕಟ್ಟಿಸಿಕೊಂಡು ಈ ಬಾರಿಯ ರಕ್ಷಾ ಬಂಧನ ಆಚರಿಸುವಂತೆ ಬಿಜೆಪಿ ಸಂಸದರಿಗೆ ಕರೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ : ಶಾಲಾ ಬಾಲಕಿಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ
ಪ್ರಧಾನಿಯ ಈ ಹೇಳಿಕೆಗೆ ತಿರುಗೇಟು ನೀಡಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಬಿಜೆಪಿ ಸಂಸದರು ತಾಕತ್ತಿದ್ದರೆ ಬಿಲ್ಕಿಸ್ ಬಾನೊ ಅವರಿಂದ ರಾಖಿ ಕಟ್ಟಿಸಿಕೊಳ್ಳಿ ಎಂದು ಸವಾಲ್ ಹಾಕಿದ್ದರು. ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಆಕೆಯ ಕುಟುಂಬಸ್ಥರನ್ನು ಹತ್ಯೆ ಮಾಡಿದ್ದ ಅಪರಾಧಿಗಳನ್ನು ಗುಜರಾತ್ ನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.