ಮೈಸೂರು: ವರುಣಾದಿಂದ ಸ್ಪರ್ಧಿಸಿದಾಗಲೆಲ್ಲಾ ಅಧಿಕಾರ ಸಿಕ್ಕಿದ್ದು, ಅಪ್ಪ ವರುಣಾದಿಂದ ಗೆದ್ದು ಸಿಎಂ ಆದರು, ಹೀಗಾಗಿ ಅವರಿಗೆ ವರುಣಾ ಕ್ಷೇತ್ರ ಲಕ್ಕಿ ಎಂದು ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ‘ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಂದೆಗೆ ವೈಯಕ್ತಿಕವಾಗಿ ಮನವಿ ಮಾಡಿದ್ದು, ನನ್ನ ಬೇಡಿಕೆಯೂ ಹೌದು. ಎಲ್ಲಿಂದ ಸ್ಪರ್ಧಿಸಬೇಕು ಎಂದು ಅವರಿನ್ನು ನಿರ್ಧರಿಸಿಲ್ಲ. ಈ ಬಾರಿಯೂ ಮುಖ್ಯಮಂತ್ರಿ ಹುದ್ದೆ ಸಿಗಬಹುದು.
ಹೀಗಾಗಿ ಅವರು ಇಲ್ಲಿಂದ ಸ್ಪರ್ಧಿಸಬೇಕು ಎಂಬುದು ನನ್ನ ಆಸೆ’ ಎಂದರು. 2023ರ ಚುನಾವಣೆ ಅವರ ಕೊನೆಯ ಚುನಾವಣೆಯಾಗಿರುವುದರಿಂದ ಸಿದ್ದರಾಮಯ್ಯನವರು ವರುಣಾದಿಂದ ಸ್ಪರ್ಧಿಸಬೇಕು ಎಂದು ಪ್ರತಿಪಾದಿಸಿದ ಯತೀಂದ್ರ, ಈ ಹಿಂದೆ ವರುಣಾ ಕ್ಷೇತ್ರವನ್ನು ಪ್ರತಿನಿಧಿಸಿದಾಗ ಪ್ರತಿಪಕ್ಷದ ನಾಯಕರಾಗಿ ನಂತರ ಮುಖ್ಯಮಂತ್ರಿಯಾದ ಕಾರಣ ವರುಣ ಅವರಿಗೆ ಅದೃಷ್ಟ ತರುತ್ತದೆ.
ಒಂದು ವೇಳೆ ತಂದೆಯವರು ವರುಣಾದಿಂದಲೇ ಸ್ಪರ್ಧಿಸಲು ನಿರ್ಧರಿಸಿದರೆ, ನಾನು ಬೇರೆಡೆ ಸ್ಪರ್ಧಿಸುವುದಿಲ್ಲ. ಬದಲಿಗೆ ತಂದೆಯ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವೆ ಎಂದು ಸ್ಫಷ್ಟಪಡಿಸಿದರು. ಬಾದಾಮಿ, ವರುಣಾ, ಹೆಬ್ಬಾಳ, ಕೋಲಾರ, ಕೊಪ್ಪಳ ಮತ್ತು ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಒತ್ತಡವಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದಾಗಲೂ ಅಲ್ಲಿಂದಲೇ ಸ್ಪರ್ಧೆಗಿಳಿಯಬಹುದೆನೋ ಅನ್ನೋ ಮಾತುಗಳು ಕೇಳಿ ಬರುತ್ತಿವೆ.