ಮಂಡ್ಯ : ರಾಜ್ಯದ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸುವಂತೆ ಇಂದು ನಗರದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರಿಗೆ ರಕ್ತದ ಸಹಿ ಮಾಡಿ ಪತ್ರ ಚಳುವಳಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆದ ಪತ್ರ ಚಳುವಳಿಯಲ್ಲಿ ಕಾವೇರಿ ವಿಚಾರದಲ್ಲಿ ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡಬೇಕೆಂದು ರಕ್ತದಲ್ಲಿ ಬರೆದು ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ ರಕ್ತದಲ್ಲಿ ಬರೆಯಲು ಮುಂದಾಗಿದ್ದ ಕಾರ್ಯಕರ್ತರನ್ನು ತಡೆಯಲು ಹೋದ ಪೊಲೀಸರು ಹಾಗೂ ಹೋರಾಟಗಾರರ ನಡುವೆ ವಾಗ್ವಾದದ ಪ್ರಸಂಗವೂ ನಡೆಯಿತು.
ಇದನ್ನೂ ಓದಿ : ಕಾವೇರಿ ಜಲ ವಿವಾದ : ಸುಪ್ರೀಂ ಮೊರೆಹೋದ ದರ್ಶನ್ ಪುಟ್ಟಣ್ಣಯ್ಯ
ನೀರು ಇಲ್ಲದೇ ಮಂಡ್ಯದ ಜನರು ಕಷ್ಟದಲ್ಲಿ ಇದ್ದಾರೆ. ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಬೇಕೆಂದು ರಕ್ತದಲ್ಲಿ ಸಹಿ ಚಳುವಳಿ ಮಾಡುತ್ತಿದ್ದೇವೆ, ನಮ್ಮನ್ನು ತಡೆಯಬೇಡಿ ಎಂದು ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾಕ್ ಸ್ವಾಮಿ ನಿಮಗೆ ನೀರು ಬೇಡ್ವಾ.. ನಿಮ್ಮ ಪರವಾಗಿಯೂ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಿಮಗೂ ಕಾವೇರಿ ನೀರು ಬೇಕು ಅಲ್ವಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಿ. ಮುಂದಿನ ದಿನಗಳಲ್ಲಿ ನೀರು ಸಿಗುವುದಿಲ್ಲ. ಬೆಂಗಳೂರಿನ ಜನತೆಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗುತ್ತದೆ, ಅವರರೂ ಕೂಡ ಹೋರಾಟ ಮಾಡಿ ಕಾವೇರಿ ಉಳಿಸಿಕೊಳ್ಳಲು ಬರಲಿ. ಸಿನಿಮಾ ನಟರಾದ ದರ್ಶನ್, ಯಶ್ ಅವರೂ ಸಹ ಕಾವೇರಿ ಹೋರಾಟಕ್ಕೆ ಬರಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ವಿಶೇಷ ಸಂಸತ್ ಅಧಿವೇಶನದಲ್ಲಿ ‘ಇಂಡಿಯಾ’ವನ್ನು ‘ಭಾರತ್’ ಎಂದು ಮರುನಾಮಕರಣ ಸಾಧ್ಯತೆ!
ಹೀಗೆ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಟ್ಟರೆ, ಮುಂದೆ ಸಂಕಷ್ಟದ ಸ್ಥಿತಿ ಎದುರಾಗುತ್ತದೆ. ಬೆಂಗಳೂರು, ಮೈಸೂರು ಜನರು ಹೋರಾಟಕ್ಕೆ ಬರಲಿ, ಇಲ್ಲದಿದ್ದರೆ ಮುಂದೆ ಪೇಪರ್ ಬಳಸಬೇಕಾದ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದಾರೆ.
ನಾವು ರಕ್ತದಲ್ಲಿ ಸಹಿ ಮಾಡಿದರೂ ಅಷ್ಟೇ, ಕತ್ತು ಕುಯ್ದುಕೊಂಡರೂ ಈ ಸರ್ಕಾರ ನೀರು ನಿಲ್ಲಿಸುವ ಹಾಗೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು, ಸಂಸದರುಗಳು ಈ ಬಗ್ಗೆ ಧ್ವನಿ ಎತ್ತಬೇಕು. ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಭಾಗದ ಸಂಸದರು ಮಾತಾಡಲೇಬೇಕು ಎಂದು ಆಗ್ರಹಿಸಿದ್ದಾರೆ.


ತಮಿಳುನಾಡಿನ ಅಭಿಮಾನಕ್ಕೆ ಹಾಗೂ ಚುನಾವಣೆಗಾಗಿ ರಾಜ್ಯ ಸರ್ಕಾರ ನೀರು ಹರಿಸುತ್ತಿದೆ. ಬೆಂಗಳೂರಿನ ಜನರು ಪಬ್,ಕ್ಲಬ್ ಅಂತ ಕುಳಿತುಕೊಂಡಿದ್ದಾರೆ. ಮಂಡ್ಯದವರು ನೀರು ಬಂದ್ ಮಾಡಿದರೆ ಅವರಿಗೆ ನೀರೇ ಸಿಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಬಳಿಕ ಅವರಿಗೆ ರಕ್ತದಲ್ಲಿ ಸಹಿ ಮಾಡಲು ಹಾಗೂ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿದರು. ನಂತರ ರಕ್ತ ಕೊಟ್ಟೆವೂ, ನೀರು ಕೊಡೇವೂ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಸಹಿ ಮಾಡಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.