ಮೈಸೂರು : ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ನೇಮಕಾತಿ ಮಾಡಲಾಗುತ್ತಿದೆ. ನಿಯಮಗಳ ಪ್ರಕಾರ 500 ಭೋದಕೇತರ ಸಿಬ್ಬಂದಿಗಳಿಗೆ ಮಾತ್ರ ಅವಕಾಶವಿದೆ. ಆದರೂ, ಹೆಚ್ಚುವರಿಯಾಗಿ 1300 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿರುದ್ಧ ನೌಕರರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಮುಕ್ತ ವಿವಿಗೆ ವಾರ್ಷಿಕ ₹86 ಕೋಟಿ ಆದಾಯವಿದೆ. ಆದರೆ, ಇಲ್ಲಿ ಖರ್ಚಾಗುತ್ತಿರುವುದು ಮಾತ್ರ ₹263 ಕೋಟಿ ಎಂಬುದು ಎಲ್ಲರನ್ನೂ ದಂಗುಬಡಿಸಿದೆ. ವಿವಿ ಆಡಳಿತ ಮಂಡಳಿ ಹೆಚ್ಚುವರಿಯಾಗಿ ₹177 ಕೋಟಿ ಖರ್ಚು ಮಾಡುತ್ತಿದೆ ಎಂಬುದು ಮಾತ್ರ ಆಘಾತಕಾರಿ ಹಾಗೂ ಅಚ್ಚರಿ ವಿಚಾರವಾಗಿದೆ.
ಇದನ್ನೂ ಓದಿ : ಶಕ್ತಿ : ಬಸ್ಸಿನ ಮೆಟ್ಟಿಲಿಗೆ ನಮಿಸಿದ್ದ ಸಂಗವ್ವನನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ
ಸರ್ಕಾರದಿಂದ ಯಾವುದೇ ಅನುದಾನ ಬಾರದೇ ಇದ್ದರೂ, ಮುಕ್ತ ವಿಶ್ವವಿದ್ಯಾಲಯದ ಖರ್ಚು ಮಾತ್ರ ಮೂರು ಪಟ್ಟು ಹೆಚ್ಚಾಗಿದೆ. ವಿವಿಯ ಖಾತೆಯಲ್ಲಿರುವ ‘ಮೀಸಲು’ ಹಣವನ್ನು ಖರ್ಚು ಮಾಡಲು ಕುಲಪತಿ ಮುಂದಾಗಿದ್ದಾರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಇದೇ ರೀತಿ ಮುಂದಿನ ಎರಡರಿಂದ ಮೂರು ವರ್ಷಗಳ ಕಾಲ ಹಣ ಪೋಲು ಮಾಡಿದರೆ ವಿವಿಯ ಖಾತೆಯೇ ಖಾಲಿಯಾಗಿ, ಬೊಕ್ಕಸ ಬರಿದಾಗುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಇಲ್ಲಿನ ನೌಕರರಿಗೂ ಸಂಬಳ ನೀಡಲು ಹಣದ ತೀವ್ರ ಅಭಾವ ಕಾಡಲಿದೆ. ಎಲ್ಲ ನೌಕರರು ಬೀದಿಪಾಲಾಗಬೇಕುತ್ತದೆ ಎಂದು ಉಪನ್ಯಾಸಕ ಡಾ. ಜಗದೀಶ್ ಬಾಬು ತಮ್ಮ ಆತಂಕ ಹೊರಹಾಕಿದ್ದಾರೆ.
ಅಲ್ಲದೆ, ವಿವಿಯ ಇನ್ನಷ್ಟು ಕರಾಳ ಮುಖಗಳ ಬಗ್ಗೆ ಮಾಹಿತಿ ನೀಡಿರುವ ಅವರು, ‘ಶಾಸಕರು, ಸಂಸದರು ಮಾಡುವ ಹಗರಣಗಳಿಗಿಂತಲೂ, ಬೃಹತ್ ಅಕ್ರಮಗಳು ಇಲ್ಲಿ ನಡೆಯುತ್ತವೆ. ಈ ಕುರಿತು ಸಂಪೂರ್ಣ ತನಿಖೆಯಾದ ಬಳಿಕ ವಿಶ್ವವಿದ್ಯಾಲಯದಲ್ಲಿ ಹುದುಗಿರುವ ಅಕ್ರಮ ಕಂದಕಗಳು ಬಯಲಿಗೆ ಬರಲಿವೆ ಎಂದು ‘ಪೊಲಿಟಿಕಲ್360’ಗೆ ಬಾಬು ಮಾಹಿತಿ ನೀಡಿದ್ದಾರೆ.
ಬಗೆದಷ್ಟು ಕರಾಳ ವಿವಿಯ ಇತಿಹಾಸ..!
ಈ ಹಿಂದೆ 2015ರಲ್ಲಿ ಅಂಕಪಟ್ಟಿ ತಿದ್ದುಪಡಿಗೆ ಸಂಬಂಧಿಸಿದಂತೆ ಇದೇ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾಗಿದ್ದ ಡಾ. ಎಚ್.ಎಲ್.ವಿಶ್ವನಾಥ ಅವರ ಮೇಲೆ ಹಣ ಪಡೆದು 200ಕ್ಕೂ ಹೆಚ್ಚು ಅಂಕಪಟ್ಟಿಗಳನ್ನೇ ತಿದ್ದುಪಡಿ ಮಾಡಿದ ಆರೋಪದ ಹಿನ್ನೆಲೆ ಅವರನ್ನು ಅಮಾನತುಗೊಳಿಸಿ, ಅವರ ವಿಚಾರಣೆಗೆ ವಿಶ್ವವಿದ್ಯಾಲಯ ಆದೇಶಿಸಿತ್ತು.
2006 ರಿಂದ 2010ರ ಅವಧಿಯವರೆಗೆ ವಿವಿಯಲ್ಲಿ ನಡೆದಿದೆ ಎನ್ನಲಾಗಿದ್ದ ಹಗರಣಕ್ಕೆ ಸಂಬಂಧಿಸಿದಂತೆ ವಿಶ್ವ ನಾಥ ಅವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾ. ಡಾ.ಕೆ.ಭಕ್ತವತ್ಸಲ ನೇತೃತ್ವದ ಸತ್ಯ ಶೋಧನ ಸಮಿತಿಯ ಶಿಫಾರಸಿನ ಅನ್ವಯ ಈ ಕ್ರಮ ಕೈಗೊಳ್ಳವಂತೆ ರಾಜ್ಯಪಾಲರು ಸೂಚಿಸಿದ್ದ, ಕಾರಣಕ್ಕೆ ವಿಶ್ವನಾಥ್ ಅವರನ್ನು ಆಗ ಅಮಾನತುಪಡಿಸಲಾಗಿತ್ತು.
ಈ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳ ಹಿಂದೆ ಇಲಾಖಾ ವಿಚಾರಣೆ ನಡೆದರೂ ಕೂಡ ಆರೋಪ ಸಾಬೀತಾದ ಬಳಿಕ ಮೂವರು ಕಾಯಂ ಸಿಬ್ಬಂದಿ ಸೇರಿದಂತೆ ಐವರು ನೌಕರರು ಕೆಲಸ ಕಳೆದುಕೊಂಡಿದ್ದರು. ಆದರೆ, ಇದರಲ್ಲಿ ಭಾಗಿಯಾಗಿದ್ದ ಅಂದಿನ ಸಹಾಯಕ ಕುಲಸಚಿವ ವಿಶ್ವನಾಥ್ ವಿರುದ್ಧ ವಿವಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಿಗೆ ಕಾಲಾಂತರದಲ್ಲಿ ಮುಂಬಡ್ತಿ ನೀಡಿ ಉಪ ಕುಲಸಚಿವರನ್ನಾಗಿಸಿತ್ತು!
ಪ್ರಭಾವಶಾಲಿಗಳು ಎಂಬ ಕಾರಣಕ್ಕೆ ಅವರನ್ನು ರಕ್ಷಿಸಿ, ಉಳಿದವರನ್ನು ಕಾಯಂ ನಿವೃತ್ತಿಗೊಳಿಸಲಾಗಿದೆ ಎಂಬ ಆರೋಪಗಳು ಆ ದಿನಗಳಲ್ಲಿ ಕೇಳಿ ಬಂದಿದ್ದವು. ಹಗರಣದಲ್ಲಿ ಭಾಗಿಯಾಗಿ, ಸೇವೆಯಿಂದ ವಜಾಗೊಂಡ ಇಬ್ಬರು ಗುತ್ತಿಗೆ ನೌಕರರು ಕೂಡ ಈ ಸಂಗತಿಯನ್ನು ನೇರವಾಗಿ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿದರು. ಈ ಎಲ್ಲ ಸಂಗತಿಯನ್ನು ‘ವಿಶ್ವವಿದ್ಯಾನಿಲಯ ಉಳಿಸಿ ವೇದಿಕೆ’ಯ ಪದಾಧಿಕಾರಿಗಳು ಭಕ್ತವತ್ಸಲ ಸಮಿತಿಯ ಗಮನಕ್ಕೆ ತಂದಿದ್ದರು. ಹಾಗಾಗಿ ವಿವಿ ಅನಿವಾರ್ಯವಾಗಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿತ್ತು.
ಕಾಸಿದ್ರೆ ಇಲ್ಲಿ ಎಲ್ಲಾ ಪಾಸು..
ಅಭ್ಯರ್ಥಿಗಳಿಂದ ಹಣ ಪಡೆದು ಅವರನ್ನು ಪಾಸ್ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಅಭ್ಯರ್ಥಿಗಳು ಫಲಿತಾಂಶ ಬಂದ ನಂತರ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಹಣ ನೀಡಿ ಇರುವ ಅಂಕಪಟ್ಟಿಯನ್ನು ತಿದ್ದಿಸುವ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪಗಳು ಪ್ರೊ. ಸುಧಾರಾವ್ ಅವರು ಕುಲಪತಿಯಾಗಿದ್ದ ವೇಳೆಯಲ್ಲಿ ಕೇಳಿಬಂದಿದ್ದವು.
ಈ ಸಂಬಂಧ ಇಲಾಖಾ ವಿಚಾರಣೆ ನಡೆದಾಗ, ಹಲವು ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಿ, ಅನುತ್ತೀರ್ಣಗೊಂಡವರನ್ನು ಉತ್ತೀರ್ಣಗೊಳಿಸಿರುವುದು ವಿಚಾರಣೆ ಯಿಂದ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾಂಗ ವಿಭಾಗದ ಇಬ್ಬರು ನೌಕರರನ್ನು ಕಾಯಂ ನಿವೃತ್ತಿಗೊಳಿಸಿ, ಒಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದರ ಜತೆಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ನೌಕರರು ಕೆಲಸ ಕಳೆದುಕೊಂಡಿದ್ದರು.
ವಿಶೇಷ ವರದಿ : ಆನಂದ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.