Tuesday, November 28, 2023
spot_img
- Advertisement -spot_img

ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು, ಹೆಚ್‌.ಸಿ.ಮಹದೇವಪ್ಪ ಮುಂದೆ ನಿಂತು ಈ ರಸ್ತೆ ಮಾಡಿಸಿದ್ದಾರೆ: ಸಿದ್ದರಾಮಯ್ಯ

ಮೈಸೂರು: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ನಮ್ಮ ಸರ್ಕಾರಕ್ಕೇ ಸಲ್ಲಬೇಕು ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆ ಮೂಲಕ ಮೈಸೂರು ಸಂಸದ ಪ್ರತಾಪ್‌ ಸಿಂಹಗೆ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 9ರಂದು ಬೆಂಗಳೂರು-ಮೈಸೂರು ಹೆದ್ದಾರಿ ಪರಿಶೀಲನೆ ನಡೆಸುತ್ತೇನೆ. ಆ ರಸ್ತೆಯ ಕ್ರೆಡಿಟ್ ನಮ್ಮ ಸರ್ಕಾರಕ್ಕೇ ಸಲ್ಲಬೇಕು. ಪ್ರತಾಪ್ ಸಿಂಹ ಅವರದ್ದಾಗಲಿ, ಬಿಜೆಪಿ ಸರ್ಕಾರದ್ದಾಗಲಿ ಯಾವುದೇ ಪಾತ್ರ ಇಲ್ಲ. ಪ್ರತಾಪ್ ಸಿಂಹ ಅವರ ಲೋಕಸಭಾ ವ್ಯಾಪ್ತಿಗೆ ಕೆಲವು ಕಿಲೋಮೀಟರ್ ರಸ್ತೆ ಮಾತ್ರ ಸೇರುತ್ತದೆ. ಆದರೂ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹೆಚ್.ಸಿ.ಮಹದೇವಪ್ಪನವರಿಗೆ ಈ ರಸ್ತೆಯ ಎಲ್ಲಾ ಮಾಹಿತಿಯೂ ಗೊತ್ತಿದೆ. ಮಹದೇವಪ್ಪನವರು ಮುಂದೆ ನಿಂತು ಈ ರಸ್ತೆಯನ್ನು ಮಾಡಿಸಿದ್ದಾರೆ ಎಂದರು. ಇನ್ನು ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಪ್ರಕರಣ ಕುರಿತು ಮಾತನಾಡಿದ ಸಿದ್ದರಾಮಯ್ಯ, ಅವರನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ. ವಿರೂಪಾಕ್ಷಪ್ಪನವರು ಎಲ್ಲಿದ್ದಾರೆ ಎಂಬುವುದು ಸರ್ಕಾರಕ್ಕೆ ಗೊತ್ತಿದೆ. ವಿರೂಪಾಕ್ಷಪ್ಪ ತಮ್ಮ ಮನೆಯಲ್ಲಿಯೇ ಓಡಾಡಿಕೊಂಡಿದ್ದಾರೆ. ಅವರನ್ನು ಬಂಧಿಸದೆ ಇವರು ನಾಟಕ ಮಾಡುತ್ತಿದ್ದಾರೆ. ವಿರೂಪಾಕ್ಷಪ್ಪನವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಅವರನ್ನು ಯಾಕೆ ಬಂಧಿಸಲಿಲ್ಲ? ಈಗ ಲುಕ್‌ಔಟ್ ನೋಟಿಸ್ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಅಷ್ಟೇ. ಭ್ರಷ್ಟಾಚಾರದ ಆರೋಪಕ್ಕೆ ಮಿಸ್ಟರ್ ಬೊಮ್ಮಾಯಿ ಅವರು ಸಾಕ್ಷಿ ಕೇಳುತ್ತಿದ್ದರು. ಈಗ ವಿರೂಪಾಕ್ಷಪ್ಪನವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಆದರೆ ಇವರು ಏನು ಕ್ರಮ ತೆಗೆದುಕೊಂಡಿದ್ದಾರೆ? ಇವರಿಗೆ ಮುಜುಗರ ಆಗಿದೆ. ಆದರೂ ಇವರು ನಮಗೆ ಮುಜುಗರ ಇಲ್ಲಾ ಎಂದು ಹೇಳುತ್ತಿದ್ದಾರೆ. ಅಪ್ಪ ಅಧ್ಯಕ್ಷ ಆಗಿದ್ದ ಕಾರಣಕ್ಕೆ ಮಗನಿಗೆ ಲಂಚ ಕೊಡಲು ಬಂದಿದ್ದರು. ಹೀಗಾಗಿ ಅಪ್ಪನೇ ಮೊದಲ ಆರೋಪಿ. ಇವರನ್ನು ಮೊದಲು ಬಂಧಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಲೋಕಾಯುಕ್ತ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಲೋಕಾಯುಕ್ತ ಬಂದ್ ಮಾಡಲಿಲ್ಲ. ನಾನು ಲೋಕಾಯುಕ್ತ ಬಂದ್ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ. ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದೆವು ಅಷ್ಟೇ. ನಾವು ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇತ್ತು. ಎಲ್ಲಾ ಸತ್ಯ ಗೊತ್ತಿದ್ದರೂ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದರು.

Related Articles

- Advertisement -spot_img

Latest Articles