ಹಾಸನ: ಅರಸೀಕೆರೆ ವಿಧಾನ ಕ್ಷೇತ್ರದ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ರಾಜಕೀಯ ಮಾಜಿ ಕಾರ್ಯದರ್ಶಿ ಎನ್.ಆರ್ ಸಂತೋಷ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಅರಸೀಕೆರೆ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಅಲ್ಲಿನ ಸೊಸೈಟಿ ಬಗ್ಗೆ ಮಾತನಾಡಿದ್ದೇ ಗಲಾಟೆಗೆ ಪ್ರಮುಖ ಕಾರಣವಾಗಿದೆ. ನಮ್ಮೂರಿನ ಸೊಟೈಟಿ ಬಗ್ಗೆ ಮಾತನಾಡಲು ನೀನ್ಯಾರು ? ನಾವೆಲ್ಲ ಕಷ್ಟಪಟ್ಟು ಒಂದು ಕೋಟಿ ದುಡ್ಡನ್ನು ಹಾಕಿಸಿದ್ದೇವೆ, ಈಗ ನೀನು ಮತ ಕೇಳಿಕೊಂಡು ಬಂದಿದ್ದೀಯಾ ? ಇಲ್ಲಿಂದ ಮೊದಲು ಹೋಗು ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮಜಾಯಿಷಿ ನೀಡಲು ಸಂತೋಷ್ ಮುಂದಾದ ವೇಳೆ, ನೀನು ಬಂದು ಊರಿಗೆ ಊರನ್ನೇ ಹೊಡೆದಾಡುಸುತ್ತಿದ್ದೀಯಾ ನಿನ್ನಂತಹವರನ್ನು ಬಹಳ ಜನ ನೋಡಿದ್ದೀವಿ. ಎಲ್ಲಿಂದಲೋ ಬಂದು ನಮ್ಮ ಮೇಲೆ ದೌರ್ಜನ್ಯ ಮಾಡಲು ಬರ್ತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗಲಾಟೆ ಜೋರಾಗಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.