ಬೆಂಗಳೂರು: ನಾನು ಬಿಜೆಪಿಗೆ ಹೋಗಿದ್ದ ಸಂದರ್ಭ, ಪರಿಸ್ಥಿತಿ ಬೇರೆ, ನಾನು ಹುಡುಗಾಟಕ್ಕೆ ಅಂತಹ ನಿರ್ಧಾರ ಕೈಗೊಂಡಿದ್ದೆ. ಇದೀಗ ಕಾಂಗ್ರೆಸ್‌ಗೆ ವಾಪಸಾಗಿ ಗೌರವ ಪಡೆದಿದ್ದೇನೆ ಎಂದು ಎನ್ ವೈ ಗೋಪಾಲಕೃಷ್ಣ ಹೇಳಿದರು.
ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಮಾತನಾಡಿ, ನನಗೆ ಆಶೀರ್ವಾದ ಮಾಡಿದರೆ ಚಿತ್ರದುರ್ಗದ ಜತೆ ಬಳ್ಳಾರಿಯಲ್ಲೂ ಕೆಲಸ ಮಾಡುತ್ತೇನೆ. ಕೂಡ್ಲಿಗಿ ಕಾರ್ಯಕರ್ತರಿಗೂ ಕಾಂಗ್ರೆಸ್ ಗೆಲ್ಲಿಸಲು ಮನವಿ ಮಾಡುತ್ತೇನೆ ಎಂದು ಹೇಳಿದರು.
‘ನಾನು ಬಿಜೆಪಿಯನ್ನು ನೋಡಿದ್ದೇನೆ. ನಾನು ಸಾಯುವ ಮುನ್ನ ಕಾಂಗ್ರೆಸ್ಸಿಗನಾಗಿ ಸಾಯಬೇಕು. ಅದಕ್ಕಾಗಿ ನಾನು ಕಾಂಗ್ರೆಸ್ ಸೇರಲು ಬಯಸುತ್ತೇನೆ’ ಎಂದರು. ಎಲೆಕ್ಷನ್ ಸಮಯದಲ್ಲಿ ಜೆಡಿಎಸ್, ಬಿಜೆಪಿ ಶಾಸಕರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ, ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್.ವೈ. ಗೋಪಾಲಕೃಷ್ಣ ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ವೇಳೆ ಕಾಂಗ್ರೆಸ್ ನಾಯಕರು ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು. ಈಗಾಗಲೇ ಪುಟ್ಟಣ್ಣ, ಬಾಬುರಾವ್ ಚಿಂಚನಸೂರು, ಎನ್.ವೈ. ಗೋಪಾಲಕೃಷ್ಣ ತಮ್ಮ ಅಧಿಕಾರ ತ್ಯಜಿಸಿ ಕಾಂಗ್ರೆಸ್ ಸೇರಿದ್ದು, ಸದ್ಯದಲ್ಲೇ ಶಿವಲಿಂಗೇಗೌಡ ಸೇರ್ಪಡೆಯಾಗಲಿದ್ದಾರೆ ಎಂದು ಡಿಕೆಶಿವಕುಮಾರ್ ಹೇಳಿದರು. ಡಿಕೆಶಿ ತಮ್ಮ ಟ್ವಿಟ್ಟರ್ ನಲ್ಲಿ ಎನ್ ವೈ ಗೋಪಾಲಕೃಷ್ಣ ಸೇರ್ಪಡೆ ಬಗ್ಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.