ಬಳ್ಳಾರಿ: ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಒಂದು ವಾರದೊಳಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತಂಡ ಕಳುಹಿಸಲಾಗಿದೆ, ಪ್ರತಿ ವಿಧಾನಸಭಾ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದರು.
ಯಾರು ಕ್ಷೇತ್ರದ ಅಭ್ಯರ್ಥಿ ಆಗಬೇಕು ಎನ್ನುವ ನಿರ್ಣಯವನ್ನು ಅಭಿಪ್ರಾಯ ಸಂಗ್ರಹದ ಆಧಾರದಲ್ಲಿ ಮಾಡಲಾಗುತ್ತದೆ. ಮೂರು ಹಂತದ ಚುನಾವಣಾ ಪ್ರಚಾರ ತಂತ್ರಗಾರಿಕೆ ಮಾಡುತ್ತೇವೆ. ಸಾರ್ವಜನಿಕ ಸಭೆಗಳು, ರೋಡ್ ಶೋ ಗಳು, ಮನೆ ಮನೆ ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತದಾರರ ಒಲವು ನಮ್ಮ ಪಕ್ಷದ ಪರವಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಗೇ ಕ್ಷೇತ್ರಕ್ಕಾಗಿ ಪರದಾಡುವ ಸ್ಥಿತಿ ಇದೆ. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಎನ್.ವೈ.ಗೋಪಾಲಕೃಷ್ಣ ರಾಜೀನಾಮೆ ವಿಚಾರವಾಗಿ ಮಾಧ್ಯಮದ ಮೂಲಕ ಗೊತ್ತಾಗಿದೆ. ರಾಜೀನಾಮೆ ನೀಡಿರುವುದಕ್ಕೆ ಯಾವ ಕಾರಣ ಕೊಟ್ಟಿಲ್ಲ. ಮುಂದೆ ನಮ್ಮ ಪಕ್ಷದಿಂದ ಯಾವ ಶಾಸಕರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿದರು.