ಮಂಗಳೂರು: ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಅನುಭವಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಮಾತನಾಡಿ, ಡಿ ಕೆ ಶಿವಕುಮಾರ್ ಕ್ಷೇತ್ರ ಗೆಲ್ಲುವ ಟೆನ್ಷನ್ನಲ್ಲಿದ್ದಾರೆ, ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಹಿಂದೆ ಪರಮೇಶ್ವರ್, ಖರ್ಗೆ ಅವರನ್ನು ಸೋಲಿಸಿದವರು ಇದೀಗ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ನ್ನು ಸೋಲಿಸಲು ತಯಾರಾಗಿದ್ದಾರೆ ಎಂದರು.
ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ, ಅಪೇಕ್ಷಿತನೂ ಅಲ್ಲ, ರೇಸ್ನಲ್ಲೂ ಇಲ್ಲ. ರಾಜ್ಯಾಧ್ಯಕ್ಷನ ಜವಾಬ್ದಾರಿಯನ್ನು ಒಳ್ಳೆಯ ರೀತಿಯಲ್ಲಿ ಮುಗಿಸ್ತೇನೆ ಅಷ್ಟೇ. ನಾನು ಸಂಘದ ಸ್ವಯಂ ಸೇವಕ, ಪಕ್ಷದ ಹಿರಿಯರು ಕೊಟ್ಟ ಜವಾಬ್ದಾರಿ ಮಾಡುತ್ತೇನೆ. ಪಕ್ಷ ಪೂರ್ಣಾವಧಿ ಪಕ್ಷದಲ್ಲೇ ಇರಲು ಸೂಚಿಸಿದರೆ ಇರುತ್ತೇನೆ ಎಂದು ತಿಳಿಸಿದರು.
ಜನರ ಅಭೂತಪೂರ್ವ ಬೆಂಬಲ ಪಕ್ಷಕ್ಕೆ ಸಿಕ್ಕಿದೆ. ಡಬಲ್ ಎಂಜಿನ್ ಸಾಧನೆ ಜನಸಾಮಾನ್ಯರಿಗೆ ತಲುಪಿದೆ. ಸಮಾಜಕಲ್ಯಾಣ ಯೋಜನೆ ಮನೆ ಮನೆಗೆ ತಲುಪಿದೆ. ಮೂಲ ಸೌಕರ್ಯ ಮನೆಮನೆ ತಲುಪಿದೆ. ಮೈಸೂರು ಭಾಗದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಸ್ಥಾನ ಪಡೆಯುತ್ತೇವೆ. ರಾಜ್ಯದಲ್ಲಿ ಬಿಜೆಪಿಯ ಪೂರ್ಣ ಬಹುಮತ ಸರಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.