ಚನ್ನರಾಯಪಟ್ಟಣ: ಶಾಸಕ ಮಾಡಾಳು ವಿರೂಪಾಕ್ಷಪ್ಪ ಬೇಲ್ ಸಿಕ್ಕಿದ ನಂತರ ಸಾರ್ವಜನಿಕ ಮೆರವಣಿಗೆ ಮಾಡಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಾಡಾಳು ವಿರೂಪಾಕ್ಷಪ್ಪನ ಪ್ರಕರಣಕ್ಕೆ ಪಕ್ಷ ಎಂದಿಗೂ ರಕ್ಷಣೆ ನೀಡುವುದಿಲ್ಲ, ಮೆರವಣಿಗೆಯಿಂದ ನಮಗೂ ಮುಜುಗರ ತಂದಿದೆ ಎಂದರು. ಮಾಡಾಳ್‌ಗೆ ಜಾಮೀನು ಸಿಕ್ಕಿರುವುದು ಕಾನೂನಾತ್ಮಕ ವಿಚಾರ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಕರ್ನಾಟಕದಲ್ಲಿಯೂ ಗೆದ್ದು ಅಧಿಕಾರಕ್ಕೆ ಬರಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ. ರಾಮನಗರ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ ಎಂದು ಅಭಿಪ್ರಾಯಪಟ್ಟರು.
ಇನ್ನೂ ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ವಿರುದ್ಧ ಯಾರೋ ಷಡ್ಯಂತ್ರ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಸಿಕ್ಕಿರೋದು ನಮ್ಮ ಕುಟುಂಬದ ಹಣವಾಗಿದ್ದು, ಅದಕ್ಕೆ ದಾಖಲೆಗಳೂ ಇವೆ. ಅದನ್ನು ವಾಪಸ್ ಪಡೆಯುತ್ತೇವೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ತಮಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ ಹೇಳಿಕೆ ನೀಡಿದ್ದರು.