ಬೆಂಗಳೂರು: ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದ್ದೀರಿ. ನಮಗೂ ನಮ್ಮ ಹಕ್ಕು ಕೊಡಿ ಎಂದು ಒಕ್ಕಲಿಗರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮನವಿ ಮಾಡಿದರು. ರಾಜ್ಯದ ಜನಸಂಖ್ಯೆಯಲ್ಲಿ ಶೇ 16ರಷ್ಟು ಇರುವ ನಮಗೆ ಶೇ 15 ರಷ್ಟು ಮೀಸಲಾತಿ ಕೊಡಿ. ನಗರ ಪ್ರದೇಶ, ಆರ್ಥಿಕ ಹಿಂದುಳಿದ ವರ್ಗ ಮೀಸಲಾತಿಯಡಿ ನಮಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಇಲ್ಲಿಯವರೆಗೂ ಸಹಿಸಿಕೊಂಡು ಬಂದಿದ್ದು ಸಾಕು. ಸಹನೆಯೇ ದೌರ್ಬಲ್ಯ ಎಂದು ತಿಳಿದುಕೊಂಡರೆ ಅದನ್ನು ಸಹಿಸಲು ಆಗುವುದಿಲ್ಲ. ಆದಷ್ಟು ಬೇಗ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು, ಕರ್ನಾಟಕದಲ್ಲಿ ಒಕ್ಕಲಿಗ ಸಮಯದಾಯದ ಜನಸಂಖ್ಯಾ ಪ್ರಮಾಣ ಶೇ 19ರಿಂದ 20ರಷ್ಟು ಇದೆ. ಇಷ್ಟು ದೊಡ್ಡ ಸಮುದಾಯಕ್ಕೆ ಕೇವಲ ಶೇ 4ರಷ್ಟು ಮಾತ್ರವೇ ಮೀಸಲಾತಿ ಸಿಕ್ಕಿದೆ. ಸರ್ಕಾರಕಕ್ಕೆ ಇಂದು ಈ ಸಮಾವೇಶದ ಮೂಲಕ ನಮ್ಮ ಮನವಿ ಸಲ್ಲಿಸುತ್ತಿದ್ದೇವೆ.
ನಮ್ಮ ಮನವಿಯನ್ನು ಸರ್ಕಾರದ ಪರವಾಗಿ ಸಚಿವರಾದ ಅಶೋಕ್, ಸುಧಾಕರ್, ಗೋಪಾಲಯ್ಯ ಪಡೆಯಲಿದ್ದಾರೆ. ಈ ಮನವಿಯನ್ನು ಸರ್ಕಾರ ಆದಷ್ಟೂ ಬೇಗ ಪರಿಗಣಿಸಬೇಕು ಎಂದರು. ಜನವರಿ 23 ರೊಳಗಾಗಿ ಮೀಸಲಾತಿ ಘೋಷಣೆ ಮಾಡಬೇಕು, ಇಲ್ಲದಿದ್ರೆ ನಮ್ಮ ಹೋರಾಟದ ಕಿಚ್ಚು ಹೊತ್ತಿಸ್ತೇವೆ ಎಂದರು.
ನಮ್ಮ ಸಮಾಜಕ್ಕೆ ದೇವೇಗೌಡರ ಹಾಗೂ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ. ಹೀಗಾಗಿ ಇವರಿಬ್ಬರನ್ನು ಗೌರವಿಸುವ ಯೋಚನೆ ಮಾಡಿದ್ದೇವೆ. ಸಮುದಾಯದ ಪರವಾಗಿ ಜನವರಿ 23 ರಂದು ಅವರಿಬ್ಬರನ್ನೂ ಗೌರವಿಸಲಾಗುವುದು. ಈಗಂತೂ ಡಬಲ್ ಸರ್ಕಾರ ಇದೆ. ಮೊನ್ನೆ ಮೋದಿಯವರು ಬಂದು ಹೋಗಿದ್ದಾರೆ. ನಮ್ಮ ಎರಡು ಬೇಡಿಕೆಯಲ್ಲಿ ಒಂದು ಕೇಂದ್ರ ಸರ್ಕಾರ ಈಡೇರಿಸಬೇಕು, ಒಂದನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದರು.