ಮೈಸೂರು: ಮಂಡ್ಯದಲ್ಲಿ ಬಿಜೆಪಿ 3-4 ಸ್ಥಾನ ಗೆಲ್ಲಲಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಸಚಿವ ನಾರಾಯಣ ಗೌಡ ಹೇಳಿದರು.
ಕೆಆರ್ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, ಮಂಡ್ಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವುದಾಗಿ ಘೋಷಿಸಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರರೊಂದಿಗೆ ಕೆಆರ್ ಪೇಟೆಗೆ ಭೇಟಿ ನೀಡಲಿದ್ದಾರೆ ಎಂದರು.
ಕೆಆರ್ ಪೇಟೆಯಿಂದ ಚುನಾವಣೆಗೆ ಸ್ಪರ್ಧಿಸಲು ನನಗೆ ಯಾವುದೇ ಭಯವಿಲ್ಲ. ಈ ಕುರಿತ ತೀರ್ಮಾನ ಜನರಿಗೇ ಬಿಡುತ್ತೇನೆ. ನೀವು ನನ್ನ ಮೇಲೆ ವಿಶ್ವಾಸವಿಟ್ಟರೆ ನಾನು ಸ್ಪರ್ಧಿಸುತ್ತೇನೆ. ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ. ರೈತರು ಮತ್ತು ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲು ನೀರಾವರಿ ಯೋಜನೆಗಳನ್ನು ತರುವ 1,900 ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿದ್ದೇನೆಂದು ತಿಳಿಸಿದರು.
ಮಂಡ್ಯ ಅಭಿವೃದ್ಧಿಪಡಿಸುವಲ್ಲಿ ಜೆಡಿಎಸ್ ಮುಖಂಡ ಹೆಚ್‌ಡಿ ಕುಮಾರಸ್ವಾಮಿ ವಿಫಲರಾಗಿದ್ದರು, ಅವರ ಮನೆ ಅನ್ನ ತಿಂದಿದ್ದೇನೆ. ಅವರನ್ನು ಟೀಕೆ ಮಾಡೊಲ್ಲ. ಆದರೆ, ನನ್ನ ನೋವು ಹೇಳುತ್ತಿದ್ದೇನೆ ಅಷ್ಟೆ ಎಂದರು.