ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಕೊನೆಯುಸಿರೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.ಗಾಂಧಿನಗರದ ಚಿತಾಗಾರದಲ್ಲಿ 100 ವರ್ಷದ ಹೀರಾಬೆನ್ ಮೋದಿ ಅವರ ಅಂತಿಮ ಕ್ರಿಯೆ ನಡೆಯಿತು.
ತಮ್ಮ ತಾಯಿಯ ನಿಧನದ ಬಗ್ಗೆ ಇಂದು ಮುಂಜಾನೆ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭವ್ಯವಾದ ಶತಮಾನವೊಂದನ್ನು ಕಳೆದ ನನ್ನ ತಾಯಿ ದೇವರ ಪಾದದ ಮೇಲೆ ಮಲಗಿದ್ದಾರೆ. ಅಮ್ಮನಲ್ಲಿ ನಾನು ಯಾವಾಗಲೂ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ. ಅವರದ್ದು ತಪಸ್ವಿಯ ಪ್ರಯಾಣ. ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ನಡೆಸಿದ ನನ್ನ ತಾಯಿ ನಮ್ಮನ್ನು ಅಗಲಿದ್ದಾರೆ.
ಅಮ್ಮನ 100ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ ಬುದ್ಧಿವಂತಿಕೆಯಿಂದ ಕೆಲಸ ಮಾಡು, ಶುದ್ಧತೆಯಿಂದ ಜೀವನ ನಡೆಸು ಎಂದು ನನಗೆ ಹೇಳಿದ್ದರು ಎಂದು ಮೋದಿ ತಮ್ಮ ತಾಯಿಯ ಬಗ್ಗೆ ಟ್ವೀಟ್ ಮಾಡಿದ್ದರು.ಶತಾಯುಷಿಯಾಗಿದ್ದ ತಮ್ಮ ತಾಯಿಯ ಅಂತಿಮ ದರ್ಶನ ಪಡೆದ ನರೇಂದ್ರ ಮೋದಿ ಅಂತಿಮಯಾತ್ರೆಯಲ್ಲಿ ತಾಯಿ ಹೀರಾಬೆನ್ ಅವರ ಮೃತದೇಹಕ್ಕೆ ಹೆಗಲು ಕೊಟ್ಟಿದ್ದರು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೋದರರೊಂದಿಗೆ ತಾಯಿಯ ಶವವನ್ನು ಹೊತ್ತು ಸಾಗಿದ್ದು, ತಾಯಿ ಹೀರಾಬೆನ್ ಅವರ ಪಾರ್ಥಿವ ಶರೀರವನ್ನು ನರೇಂದ್ರ ಮೋದಿ ಹೊತ್ತೊಯ್ಯುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.