ನವದೆಹಲಿ: ಮಂಡ್ಯ ಅದ್ಭುತವಾಗಿದೆ ಮತ್ತು ಜನರ ಪ್ರೀತಿಯನ್ನು ಯಾವಾಗಲೂ ಆರಾಧಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಡ್ಯ ಮತ್ತು ಉತ್ತರ ಕರ್ನಾಟಕದ ಧಾರವಾಡದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದರು.
ಅಂದಹಾಗೇ ಮೋದಿ ಮಂಡ್ಯದ ಭೇಟಿ ಬಗ್ಗೆ ತಮ್ಮ ಸುಂದರ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಾಗರಿಕರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸುಮಾರು 16,000 ಕೋಟಿ ರೂಪಾಯಿ ಮೌಲ್ಯದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಸೇರಿದಂತೆ ವಿವಿಧ ಯೋಜನೆಗಳ ಶಂಕುಸ್ಥಾಪನೆಯನ್ನು ನರೇಂದ್ರ ಮೋದಿ ನೆರವೇರಿಸಿದರು.
ಕರ್ನಾಟಕವು ಅಭಿವೃದ್ಧಿಯ ಶಕ್ತಿಕೇಂದ್ರವಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.ಮೈಸೂರು ಮಂಡ್ಯ ಹೆದ್ದಾರಿ ಉದ್ಘಾಟನೆಗೆಂದು ಮಂಡ್ಯಕ್ಕೆ ಮೋದಿ ಭೇಟಿ ನೀಡಿದ್ದು, ಪ್ರಧಾನಿಯಾಗಿ 2 ನೇಯ ಭೇಟಿ ಇದಾಗಿತ್ತು. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ವೇಳೆ ಮಂಡ್ಯ ಜನ ಪ್ರಧಾನಿ ಮೇಲೆ ಕೇಸರಿ ಹೂ ಮಳೆಯನ್ನೇ ಸುರಿಸಿ ಪ್ರೀತಿಯಿಂದ ಸ್ವಾಗತಿಸಿದರು. ಈ ಸ್ವಾಗತವನ್ನು ನರೇಂದ್ರ ಮೋದಿ ಕೊಂಡಾಡಿದ್ದಾರೆ.