ಚಾಮರಾಜನಗರ: ಪ್ರಧಾನಿ ಮೋದಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿ ಹಾಗೂ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರ ಭೇಟಿ ನೀಡಿದರು. ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ಕೊಟ್ಟಿದ್ದು, ವನ್ಯಜೀವಿ ಸಫಾರಿ ನಡೆಸಿದರು.
ಪ್ರಧಾನಿ ಮೋದಿ ಸಫಾರಿ ವಾಹನದೊಂದಿಗೆ ಒಟ್ಟು ಒಂಭತ್ತು ವಾಹನಗಳು ಜೊತೆಗೆ ಸಾಗಿದವು.ಬಂಡೀಪುರದಲ್ಲಿ ಸಫಾರಿ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತೆಪ್ಪಕಾಡಿನ ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. ಈ ವೇಳೆ ಆನೆ ಶಿಬಿರದಲ್ಲಿ ವಿಹರಿಸಿ ಗಜಪಡೆಗೆ ಮೋದಿ ಕಬ್ಬು ತಿನ್ನಿಸಿದರು. ಇದೇ ಸಂದರ್ಭದಲ್ಲಿ ಆಸ್ಕರ್ ವಿಜೇತ ‘ದ ಎಲಿಫೆಂಟ್ ವಿಸ್ಪರರ್ಸ್’ ಚಿತ್ರದ ಮುಖ್ಯ ಪಾತ್ರಧಾರಿಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಮೋದಿ ಭೇಟಿ ಮಾಡಿದರು.
ರಾಜ್ಯದಲ್ಲೇ ಅತಿ ಹೆಚ್ವು ಹುಲಿಗಳ ಆವಾಸ ಸ್ಥಾನ ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಫಾರಿಗೆ ತೆರಳಿದ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರಮೋದಿಯವರು ಎಂದು ಸಿಎಂ ಬೊಮ್ಮಾಯಿಯವರು ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ.
ಟೋಪಿ, ಗಾಗಲ್ಸ್ ಜೊತೆಗೆ ಕ್ಯಾಮರಾ ಹಿಡಿದು ಸಫಾರಿ ದಿರಿಸಿನಲ್ಲಿ ಕಾಡಿಗೆ ಮೋದಿ ಸಂಚರಿಸಿ ವನ್ಯಜೀವಿಗಳು, ಪ್ರಕೃತಿಯನ್ನು ಕಣ್ಣು ತುಂಬಿಕೊಂಡರು.