ಮೊರಾಕೊ : ನಿನ್ನೆ (ಶುಕ್ರವಾರ) ತಡರಾತ್ರಿ ಮಧ್ಯ ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದುವರೆಗೆ 296 ಜನರು ಸಾವನ್ನಪ್ಪಿದ್ದಾರೆ. ಈ ಕುರಿತು ಅಲ್ಲಿನ ಆಂತರಿಕ ಸಚಿವಾಲಯ ಇಂದು (ಶನಿವಾರ) ಮುಂಜಾನೆ ಮಾಹಿತಿ ನೀಡಿದೆ.
ಭೂಕಂಪದಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಸುಮಾರು 160ರಷ್ಟು ಜನರು ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ನೆರವಿಗೆ ಸಿದ್ದ ಎಂದ ಪ್ರಧಾನಿ :ಭೂಕಂಪದ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮೊರಾಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ ಆಗಿರುವ ಪ್ರಾಣ ಹಾನಿಯಿಂದ ತೀವ್ರ ನೋವಾಗಿದೆ. ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ಮೊರಾಕೊದ ಜನರೊಂದಿಗೆ ಇವೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಪ್ರಕಾರ, ಒಂದು ಶತಮಾನಕ್ಕೂ ಹೆಚ್ಚು ಅವಧಿಯ ಬಳಿಕ ಇಂತಹ ಭಯಾನಕ ಭೂಕಂಪ ಸಂಭವಿಸಿದೆ. ಶತಮಾನದ ನಂತರ ಉತ್ತರ ಆಫ್ರಿಕಾದ ರಾಷ್ಟ್ರವೊಂದರಲ್ಲಿ ಸಂಭವಿಸಿದ ಪ್ರಬಲ ಕಂಪನ ಇದಾಗಿದೆ ಎಂದು ಹೇಳಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.