ನವದೆಹಲಿ : ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಕ್ರಿಪ್ಟೋ ಕರೆನ್ಸಿಗೆ ಜಾಗತಿಕ ಚೌಕಟ್ಟಿನ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬಿ20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ, ಕ್ರಿಪ್ಟೋ ಕರೆನ್ಸಿ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ಸಮಸ್ಯೆಗಳ ಕುರಿತು ಯೋಚಿಸುವಂತೆ ಉದ್ಯಮಿಗಳನ್ನು ಕೇಳಿದರು. ತಂತ್ರಜ್ಞಾನದಲ್ಲಿ ಅಡಚಣೆ ನಿವಾರಿಸಲು ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೇಲೆ ಕೇಂದ್ರೀಕರಿಸುವ ಅವಶ್ಯಕತೆಯಿದೆ ಎಂದರು.
ದಕ್ಷ ಮತ್ತು ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಹೊಂದಿದೆ ಎಂದ ಪ್ರಧಾನಿ, ಗ್ರಾಹಕ ನೀತಿಗಳು ಮತ್ತು ಗ್ರೀನ್ ಕ್ರೆಡಿಟ್ ವಿಧಾನದ ಮೇಲೆ ಕೇಂದ್ರೀಕರಿಸಲು ಉದ್ಯಮಿಗಳಿಗೆ ಸಲಹೆ ನೀಡಿದರು. ವ್ಯಾಪಾರವು ‘ಸಾಮರ್ಥ್ಯವನ್ನು ಸಮೃದ್ಧಿಯಾಗಿ ಪರಿವರ್ತಿಸುತ್ತದೆ, ಆಕಾಂಕ್ಷೆಗಳನ್ನು ಸಾಧನೆಗಳಾಗಿ ಪರಿವರ್ತಿಸುತ್ತದೆ, ಅವುಗಳು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ’ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ : ಚಂದ್ರಯಾನ ನವ ಭಾರತಕ್ಕೆ ಸ್ಫೂರ್ತಿ, ಜಿ 20ಗೆ ಭಾರತ ಸನ್ನದ್ಧ : ‘ಮೋದಿ ಮನ್ ಕಿ ಬಾತ್’
ಬಿ20 ಅಥವಾ ಬ್ಯುಸಿನೆಸ್ 20 ಶೃಂಗ ಸಭೆಯು ಜಿ20 ಶೃಂಗಸಭೆಯ ಒಂದು ಭಾಗವಾಗಿದೆ. ದೆಹಲಿಯಲ್ಲಿ ನಡೆದ ಬಿ20 ಶೃಂಗಸಭೆಯಲ್ಲಿ1,700 ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಆರ್ಥಿಕ ತಜ್ಞರು ಭಾಗವಹಿಸಿದ್ದರು. 2010 ರಲ್ಲಿ ಬಿ20 ಶೃಂಗಸಭೆ ಪ್ರಾರಂಭಿಸಲಾಯಿತು. ದೆಹಲಿಯಲ್ಲಿ ಮೂರು ದಿನಗಳ ಬಿ20 ಶೃಂಗಸಭೆ ಆಗಸ್ಟ್ 25 ಶುಕ್ರವಾರ ಪ್ರಾರಂಭಗೊಂಡು, ಇಂದು ಆಗಸ್ಟ್ 27ರಂದು ಸಮಾಪ್ತಿಯಾಯಿತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.