ಮಂಗಳೂರು: ಕಾರ್ಕಳ ಕ್ಷೇತ್ರದಲ್ಲಿ ಒಳ್ಳೆಯ ಕಾರ್ಯಕರ್ತರಿಗೆ ಪಕ್ಷ ಟಿಕೆಟ್ ನೀಡಲಿದೆ. ಈ ಚುನಾವಣೆಯಲ್ಲಿ ಹರ್ಷ ಮೊಯಿಲಿ ಕಾರ್ಕಳದಲ್ಲಿ ಮಾತ್ರವಲ್ಲ, ಬೇರೆ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯಿಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾನೂ ಸ್ಪರ್ಧಿಸುವುದಿಲ್ಲ. ನನ್ನ ಮಗ ಹರ್ಷ ಮೊಯಿಲಿಯೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ಗೆ ರಾಷ್ಟ್ರೀಯ ಹಿತ ಚಿಂತನೆ ಮುಖ್ಯ. ನಾವು ಜಾತಿ, ಮತ ಹಾಗೂ ಪ್ರಾದೇಶಿಕತೆಯನ್ನು ಆಧರಿಸಿ ಆಲೋಚಿ ಸಲು ಬರುವುದಿಲ್ಲ. ಜನರ ಆಲೋಚನೆ ಗಳನ್ನೂ ಸರಿಯಾದ ದಿಕ್ಕಿನಲ್ಲಿ ಕೊಂಡೊ ಯ್ಯುವ ಮೂಲಕ ಸಾಮಾಜಿಕ ಸುಸ್ಥಿರತೆ ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಏನು ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದೇನೆ. ಕೆಲವೊಂದು ವಿಚಾರದಲ್ಲಿ ಎಚ್ಚರವಹಿಸಿದ್ದೇ ಆದರೆ, ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿ ದಂತೆ ರಾಜ್ಯದಲ್ಲೂ ಗೆಲುವು ಸಾಧಿಸಬಹುದು. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕಾಂಗ್ರೆಸ್- ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ’ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮೊಯಿಲಿ ‘ಬಿಜೆಪಿಗೆ ಮುಖವೇ ಇಲ್ಲ. ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟು, 12 ರಾಜ್ಯಗಳಲ್ಲಿ ಅಧಿಕಾರವನ್ನು ಅಕ್ರಮವಾಗಿ ಬಿಜೆಪಿ ಕಬಳಿಸಿದೆ. ಅವರಿಗೆ ರಾಷ್ಟ್ರಹಿತ ಬೇಕಿಲ್ಲ’ ಎಂದರು. ‘ಕಾಂಗ್ರೆಸ್ ಯಾವುದೇ ಮೃದು ಹಿಂದುತ್ವವನ್ನು ಪ್ರತಿಪಾದಿಸಿಲ್ಲ. ಸರ್ವರ ಹಿತವೇ ಪಕ್ಷದ ಧ್ಯೇಯ. ಭಾರತೀಯತೆ ಬೆಳೆಯಬೇಕು, ಸರ್ವ ಧರ್ಮ ಸಮನ್ವಯದ ತಾಣವಾಗಬೇಕು’ ಎಂದು ಹೇಳಿದರು.